ರಾಜ್ಯ

ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ; ಶಾಸಕ ಬೈರತಿ ಸುರೇಶ್- ನೋಡಲ್ ಅಧಿಕಾರಿ ನಡುವೆ ಜಟಾಪಟಿ

Manjula VN

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿದ ಬಳಿಕ ಪಾಲಿಕೆಯ ಸೇವೆಯಲ್ಲಿ ಯಾವುದೇ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿ ವಾರ್ಡ್‌ಗೂ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ನೇಮಕಗೊಂಡ ಮರುದಿನವೇ ನೋಡಲ್‌ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಿದ ಘಟನೆ ನಡೆದಿದೆ. 

ಹೆಬ್ಬಾಳ ಕ್ಷೇತ್ರದ ಜೆ.ಸಿ.ನಗರ ವಾರ್ಡ್‌ನ ನೋಡಲ್‌ ಅಧಿಕಾರಿಯನ್ನಾಗಿ ವಿಶೇಷ ಆಯುಕ್ತ (ಕಲ್ಯಾಣ) ಜಿ.ರವೀಂದ್ರ ಅವರನ್ನು ನೇಮಿಸಲಾಗಿದೆ. 

ವಾರ್ಡ್‌ಗೆ ನಿನ್ನೆ ಭೇಟಿ ನೀಡಿದ ರವೀಂದ್ರ ಅವರು ಬೀದಿ ಬದಿ ವ್ಯಾಪಾರಿಗಳನ್ನು ಹಾಗೂ ಕೆಲವು ಮಳಿಗೆಗಳಿಂದ ಹೊರಚಾಚಿರುವ ಚಾವಣಿಗಳನ್ನು ತೆರವುಗೊಳಿಸುವಂತೆ ವಾರ್ಡ್‌ನ ಅಧಿಕಾರಿಗಳಿಗೆ ಸೂಚಿಸಿದ್ದರು. 

ಇದಕ್ಕೆ ವರ್ತಕರು ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಿಗೆದ್ದ ರವೀಂದ್ರ ಜೆಸಿಬಿ ತರಿಸಿ ಅವುಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ ಸ್ಥಳೀಯರು ಈ ಬಗ್ಗೆ ಶಾಸಕ ಬೈರತಿ ಸುರೇಶ್‌ಗೆ ದೂರು ನೀಡಿದ್ದಾರೆ. 

ಈ ವೇಳೆ ಸ್ಥಳಕ್ಕೆ ಧಾವಿಸಿದ ಭೈರತಿ ಸುರೇಶ್‌ ಅವರು, ನೋಡಲ್ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 

ಸಭೆ ವೇಳೆ ಕಾರ್ಪೋರೇಟರ್ ಗಳು ಇಲ್ಲದ ಸಂದರ್ಭದಲ್ಲಿ ಯಾವುದೇ ಕೊರತೆಗಳು ಎದುರಾಗದಂತೆ ಅವರ ಕರ್ವತ್ಯಗಳಾದ ಅತಿಕ್ರಮಣಗಳ ತೆರವು, ಕಸ ನಿರ್ವಹಣೆ ಮತ್ತು ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ಕರ್ತವ್ಯವನ್ನು ನಮಗೆ ನೀಡಲಾಗಿದೆ. ವ್ಯಾಪಾರದ ಸಂದರ್ಭದಲ್ಲಿ ಟ್ರಕ್ ವೊಂದು ರಸ್ತೆಯಲ್ಲಿ ನಿಂತಿರುವುದು ಕಂಡು ಬಂದಿತ್ತು. ಕೆಲವರು ತಾತ್ಕಾಲಿಕ ಹಾಗೂ ಶಾಶ್ವತವಾಗಿ ಪಾದಚಾರಿ ಮಾರ್ಗವನ್ನು ಅತಿಕ್ರಮಣಗೊಳಿಸಿಕೊಂಡಿರುವುದು ಕಂಡು ಬಂದಿತ್ತು ಎಂದು ರವೀಂದ್ರ ಅವರು ಹೇಳಿದ್ದಾರೆ. 

ಘಟನೆ ಕುರಿತಂತೆ ಭೈರತಿ ಸುರೇಶ್ ಅವರು ಮಾತನಾಡಿ, ನಾವು ಯಾವುದೇ ಕಾರ್ಯಾಚರಣೆ ವಿರುದ್ಧವಿಲ್ಲ. ಆದರೆ, ಅಂಕವಿಕಲರಾಗಿರುವ ವ್ಯಕ್ತಿ ಚಹಾ ಅಂಗಡಿಯನ್ನು ತೆರವುಗೊಳಿಸಿರುವುದು ಸರಿಯಲ್ಲ. ದೊಡ್ಡ ದೊಡ್ಡ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಣಗೊಳಿಸಿಕೊಂಡಿದ್ದಾರೆ. ಅದನ್ನು ಪರಿಶೀಲಿಸುವುದಿಲ್ಲ. ‘ನೋಡಲ್‌ ಅಧಿಕಾರಿಗಳನ್ನು ನೇಮಿಸಿರುವುದು ಜನರೊಂದಿಗೆ ಸಮನ್ವಯ ಸಾಧಿಸಲು ಹೊರತು ಜನರ ಜೊತೆ ದರ್ಪದಿಂದ ವರ್ತಿಸುವುದಕ್ಕಲ್ಲ. ಅಂಗವಿಕಲರು, ಬಡವರು ಜೀವನೋಪಾಯಕ್ಕೆ ವ್ಯಾಪಾರ ಮಾಡುತ್ತಿದ್ದಾರೆ. ಅತಿಕ್ರಮಣಗಳನ್ನು ತೆರವುಗೊಳಿಸುವುದು ನೋಡಲ್ ಅಧಿಕಾರಿಗಳ ಕೆಲಸವಲ್ಲ. ಆದರೆ, ರವೀಂದ್ರ ಅವರು ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದಿದ್ದಾರೆಂದು ಹೇಳಿದ್ದಾರೆ. 

ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಿಬಿಎಂಪಿ ಆಯುಕ್ತ
ನಿನ್ನೆಯಷ್ಟೇ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು, ನೋಡಲ್ ಅಧಿಕಾರಿಗಳು ಆಯಾ ವಾರ್ಟ್ ಜನರ ಸಮಸ್ಯೆ, ಕುಂದು-ಕೊರತೆಗಳಿಗೆ ಕೂಡಲೇ ಸ್ಪಂದಿಸಬೇಕು. ಆಯಾ ವಾರ್ಡ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ವಾರಕ್ಕೆ ಕನಿಷ್ಟ 3 ಬಾರಿ ಬೆಳಿಗ್ಗೆ 6.30ಕ್ಕೆ ವಾರ್ಟ್ ಪರಿವೀಕ್ಷಣೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. 

SCROLL FOR NEXT