ರಾಜ್ಯ

ನವೀಕರಿಸಬಹುದಾದ ಇಂಧನದ ಹೆಚ್ಚುವರಿ ಲಭ್ಯತೆ: ಬೇರೆ ರಾಜ್ಯಗಳಿಗೆ ಇಂಧನ ಮಾರಾಟ ಮಾಡಲು ಕರ್ನಾಟಕ ಒಲವು

Sumana Upadhyaya

ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದನೆ ವಿಚಾರದಲ್ಲಿ ಕರ್ನಾಟಕ ರಾಜ್ಯ ಕ್ಯಾಲಿಫೋರ್ನಿಯಾಕ್ಕೆ ಸಮಾನವಾಗಿ ನಿಲ್ಲುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ಈ ಬಗ್ಗೆ ಉತ್ಪಾದನೆ ಮಾಡಿದ ಇಂಧನಗಳ ಸಂಗ್ರಹ ಮತ್ತು ಬಳಕೆ ಬಗ್ಗೆ ರಾಜ್ಯ ಇಂಧನ ಇಲಾಖೆಯ ಅಧಿಕಾರಿಗಳು ಕ್ಯಾಲಿಫೋರ್ನಿಯಾ ಇಂಧನ ಆಯುಕ್ತರ ಜೊತೆ ವರ್ಚುವಲ್ ಸಭೆ ನಡೆಸಿದರು. ನಮ್ಮ ಸಂಪನ್ಮೂಲಗಳ ಹಂಚಿಕೆ ಮತ್ತು ನಮ್ಮ ಜ್ಞಾನಗಳ ವಿನಿಮಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು 30 ಸಾವಿರದ 063 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ನಲ್ಲಿ 7 ಸಾವಿರದ 334 ಮೆಗಾ ವ್ಯಾಟ್ ಸೌರ ವಿದ್ಯುತ್ ನಿಂದ, 4 ಸಾವಿರದ 823 ಮೆಗಾ ವ್ಯಾಟ್ ಗಾಳಿಯಿಂದ, 903 ಮೆಗಾ ವ್ಯಾಟ್ ಮಿನಿ ಹೈಡಲ್ ಪ್ರಾಜೆಕ್ಟ್ ನಿಂದ, 1,731 ಮೆಗಾ ವ್ಯಾಟ್ ಸಹ ಉತ್ಪಾದನಾ ಘಟಕಗಳಿಂದ ಮತ್ತು 3 ಸಾವಿರದ 798 ಮೆಗಾ ವ್ಯಾಟ್ ಹೈಡ್ರೊ ಪ್ರಾಜೆಕ್ಟ್ ನಿಂದ ಉತ್ಪಾದನೆಯಾಗುತ್ತದೆ. ಒಟ್ಟು ಶೇಕಡಾ 49.6ರಷ್ಟು ಇಂಧನ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದನೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ, ಕರ್ನಾಟಕದಲ್ಲಿ ಅತಿಹೆಚ್ಚು ನವೀಕರಿಸಬಹುದಾದ ಇಂಧನ ತಯಾರಾಗುತ್ತಿದ್ದು, ಅದು ತುಮಕೂರಿನ ಪಾವಗಡ ಗ್ರಾಮದ 2 ಸಾವಿರ ಮೆಗಾ ವ್ಯಾಟ್ ಸೌರ ವಿದ್ಯುತ್ ಘಟಕಗಳಿಂದ ದೊರಕುತ್ತಿದೆ. ಕೇಂದ್ರ ಸಚಿವಾಲಯ ಶೇಕಡಾ 7.25ರಷ್ಟು ಸೌರಶಕ್ತಿ ಗುರಿಯನ್ನು ನಿಗದಿಪಡಿಸಿದ್ದು, ಕರ್ನಾಟಕ ಶೇಕಡಾ 16.80ರಷ್ಟು ಉತ್ಪಾದನೆ ಮಾಡುತ್ತದೆ. ಶೇಕಡಾ 17.85ರಷ್ಟು ಹಸಿರು ಇಂಧನವನ್ನು ಉತ್ಪಾದನೆ ಮಾಡುವ ಅಗತ್ಯವಿದ್ದು ಕರ್ನಾಟಕದಲ್ಲಿ ಶೇಕಡಾ 39.97ರಷ್ಟು ಉತ್ಪಾದನೆಯಾಗುತ್ತದೆ ಎಂದು ಮಹೇಂದ್ರ ಜೈನ್ ಹೇಳುತ್ತಾರೆ.

SCROLL FOR NEXT