ರಾಜ್ಯ

ಸುರೇಶ್ ಅಂಗಡಿ ಸಮಾಧಿ, ರುದ್ರಭೂಮಿಗೆ ತಡೆಗೋಡೆ ನಿರ್ಮಿಸಿ: ಸಿಎಂ ಯಡಿಯೂರಪ್ಪಗೆ ಮನವಿ

Lingaraj Badiger

ಬೆಂಗಳೂರು: ಇತ್ತೀಚೆಗೆ ನಿಧನರಾದ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನಡೆಸಿದ ದೆಹಲಿಯ ವೀರಶೈವ ಲಿಂಗಾಯತ ರುದ್ರಭೂಮಿಗೆ ತಡೆಗೋಡೆ ನಿರ್ಮಿಸುವಂತೆ ಸುರೇಶ್ ಅಂಗಡಿ ಅವರ ಅಳಿಯಂದಿರಾದ ಸಂಕಲ್ಪ ಶೆಟ್ಟರ್ ಹಾಗೂ ಡಾ. ರಾಹುಲ್ ಪಾಟೀಲ್ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊರೋನಾ ಸೋಂಕಿಗೆ ಒಳಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ಸ್ಥಳದಲ್ಲಿ ದಿವಂಗತರ ಘನತೆಗೆ ತಕ್ಕುದಾದ ಸಮಾಧಿ ನಿರ್ಮಿಸುವ ಮೂಲಕ ಗೌರವ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ದ್ವಾರಕದಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಗೆ ತಡೆಗೋಡೆ ಹಾಗೂ ಸಮಾಧಿಯನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದರು.

ಕಳೆದ ಬುಧವಾರ ಸುರೇಶ್ ಅಂಗಡಿ ಅವರು ಕೊರೋನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕೋವಿಡ್-19 ಶಿಷ್ಟಾಚಾರದ ಪ್ರಕಾರವೇ ಅವರನ್ನು ಮಣ್ಣು ಮಾಡಲಾಯಿತು. ರುದ್ರಭೂಮಿಗೆ ಕೆಲವೇ ಕೆಲವು ಜನರಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಕುಟುಂಬ ವರ್ಗದವರು ಪಿಪಿಇ ಕಿಟ್ ಹಾಕಿಕೊಂಡೆ ಪೂಜಾ ವಿಧಾನಗಳನ್ನು ಪೂರೈಸಿದ್ದರು.

SCROLL FOR NEXT