ರಾಜ್ಯ

ಎಂಜಿನಿಯರಿಂಗ್ ದೋಷಗಳೇ ಭೂಕುಸಿತಕ್ಕೆ ಕಾರಣ: ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

Manjula VN

ಬೆಂಗಳೂರು: ಎಂಜಿನಿಯರಿಂಗ್ ದೋಷಗಳೇ ರಾಜ್ಯದಲ್ಲಿ ಎದುರಾದ ಭೂಕುಸಿತಕ್ಕೆ ಕಾರಣ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ತಿಳಿಸಿದೆ. 

ಕಳೆದ 3 ವರ್ಷಗಳಲ್ಲಿ ಮಲೆನಾಡಿನಲ್ಲಿ ಭೂಕುಸಿತದಿಂದ ವ್ಯಾಪಕವಾಗಿ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಧ್ಯಯನ ನಡೆಸಲು ಉದ್ದೇಶಿಸಿ ರಚಿಸಿದ್ದ ಸಮಿತಿ ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿಗಳಿಗೆ ಗೃಹ ಕಚೇರಿಯಲ್ಲಿ ಗುರುವಾರ ಸಲ್ಲಿಸಿತು. 

ವರದಿಯಲ್ಲಿ ಎಂಜಿನಿಯರಿಂಗ್ ದೋಷಗಳೇ ರಾಜ್ಯದಲ್ಲಿ ಎದುರಾದ ಭೂಕುಸಿತಕ್ಕೆ ಕಾರಣ ಎಂದು ಹೇಳಿದೆ ಎಂದು ತಿಳಿದುಬಂದಿದೆ. ಅಲ್ಲದೆ. ನಾಡಿನಲ್ಲಿ ಘಟಿಸುತ್ತಿರುವ ಭೂ ಕುಸಿತದ ಸಮಗ್ರ ನಿಯಂತ್ರಣ ಸಂಬಂಧ ಕರ್ನಾಟಕ ರಾಜ್ಯ ಅವಘಡ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಸೂಕ್ತ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ನೀಡಿದೆ. 

ಸಮಿತಿಯಲ್ಲಿ ಒಬ್ಬರಾಗಿರುವ ಪ್ರೊ.ಟಿವಿ.ರಾಮಚಂದ್ರ ಅವರು ಮಾತನಾಡಿ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭೂಕುಸಿತವು ರೆಸಾರ್ಟ್ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ಹೊಂದಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಸಂಭವಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಈ ನಡುವೆ ಅಧ್ಯಯಯನ ನಡೆಸಲು ಸಮಿತಿಯು ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಜುಲೈ-ಆಗಸ್ಟ್ ತಿಂಗಳಿನಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭವಿಷ್ಯದಲ್ಲಿ 7 ಜಿಲ್ಲೆಯ 23 ತಾಲೂಕುಗಳಲ್ಲಿ ಭೂ ಕುಸಿತವಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. 

ಸಮಿತಿಯ ಸಲಹೆಗಳು ಇಂತಿವೆ...

  • ಸೂಕ್ತ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಇರುವ ಸಂಪೂರ್ಣ ತಾಂತ್ರಿಕ ಮಾಹಿತಿಗಳನ್ನು ನೀಡುವ ನೋಡಲ್ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ಅವಘಡ ಉಸ್ತುವಾರಿ ಕೇಂದ್ರವನ್ನು ಗುರ್ತಿಸಬೇಕು. 
  • ಮಲೆನಾಡು ಮತ್ತು ಕರಾವಳಿಯಲ್ಲಿ ಘಟಿಸುತ್ತಿರುವ ಭೂಕುಸಿತವನ್ನು ಕಾನೂನಿನ್ವಯ ನೈಸರ್ಗಿಕ ಅವಘಡಗಳ ವ್ಯಾಖ್ಯೆಯಡಿ ಗುರುತಿಸಬೇಕು. 
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಸರ್ಗಿಕ ಅವಘಡಗಳನ್ನು ನಿರ್ವಹಿಸಲು ಬಳಸುವ ಎಲ್ಲಾ ಬಗೆಯ ಸಂಪನ್ಮೂಲಗಳನ್ನು ಬಳಸಲು ಸಾಧ್ಯವಾಗುವಂತೆ ಸೂಕ್ತ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕು. 
  • ಕರ್ನಾಟಕ ರಾಜ್ಯ ನೈಸರ್ಗಿಕ ಅವಘಡ ಉಸ್ತುವಾರಿ ಕೇಂದ್ರಕ್ಕೆ ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಅಂಗ ಸಂಸ್ಥೆಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ಆರ್'ಡಿಎಂಎಸ್ ಕೇಂದ್ರಗಳು ಈ ಜವಾಬ್ದಾರಿ ನಿರ್ವಹಿಸಬಹುದಾಗಿದೆ. 
  • ಭೂ ಕುಸಿತದ ಸಾಧ್ಯತೆಯಿರುವ ಪ್ರದೇಶಗಳ ಗ್ರಾಮ ಮಟ್ಟದ ನಕ್ಷೆಯನ್ನು ರಚಿಸಬೇಕು. ಭೂಕುಸಿತ ಕುರಿತು ಮೊದಲೇ ಶೀಘ್ರ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ತಿಳಿಸಿದೆ. 
SCROLL FOR NEXT