ರಾಜ್ಯ

ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಕಮಲ್ ಪಂತ್ ಭೇಟಿ

Nagaraja AB

ಬೆಂಗಳೂರು: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗುರುವಾರ ಮೆಜೆಸ್ಟಿಕ್ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ಸು ನಿಲ್ದಾಣಕ್ಕೆ ಭೇಟಿ ನೀಡಿ, ಭದ್ರತೆ ಕುರಿತು ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಲು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಭೇಟಿ ನೀಡಿದ್ದು, ಭದ್ರತೆ ಕುರಿತು ಪರಿಶೀಲನೆ ನಡೆಸಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಎಸಿಪಿ ರವಿ ಕುಮಾರ್ ಹಾಗೂ ಸಂಚಾರಿ ಪೊಲೀಸರ ನೇತೃತ್ವದಲ್ಲಿ ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದರು.

ನಗರದಾದ್ಯಂತ ನಿನ್ನೆಯಿಂದ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಯಾವುದೇ ಪ್ರತಿಭಟನೆ ಹಾಗೂ ಗೊಂದಲಕ್ಕೆ ಅವಕಾಶವಿಲ್ಲ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಗರದಲ್ಲಿ ಖಾಸಗಿ ಬಸ್ಸುಗಳಿಗೆ ಸೂಕ್ತ ಭದ್ರತೆ ನೀಡಲಾಗುತ್ತಿದ್ದು, ಇನ್ನು ಹೆಚ್ಚು ಬಸ್ಸುಗಳು ರಸ್ತೆಗೆ ಇಳಿದರು ಭದ್ರತೆ ಕಲ್ಪಿಸಲಾಗುವುದು ಎಂದರು‌.

ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ. ಇಲ್ಲಿಯವರೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ .ಇನ್ನು, ಸಂಚಾರಕ್ಕೆ ಯಾರೇ ಅಡ್ಡಿ ಪಡಿಸಿದರೂ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸದ್ಯ ಪರಿಶೀಲನೆ ವೇಳೆ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿಲ್ಲ. ಸಾರಿಗೆ ಇಲಾಖೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿದರೂ, ಭದ್ರತೆ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

SCROLL FOR NEXT