ರಾಜ್ಯ

ಸಾರಿಗೆ ನೌಕರರ ಮುಷ್ಕರ 6ನೇ ದಿನಕ್ಕೆ: ರಸ್ತೆಗಿಳಿಯದ ಸರ್ಕಾರಿ ಬಸ್ಸುಗಳು, ಇಂದು ನೌಕರರಿಂದ ತಟ್ಟೆ, ಲೋಟ ಚಳವಳಿ

Sumana Upadhyaya

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 6ನೇ ದಿನಕ್ಕೆ ಕಾಲಿಟ್ಟಿದ್ದು ಪ್ರಯಾಣಿಕರ ಪರದಾಟ ಮುಂದುವರಿದಿದೆ.

ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿಗಳಲ್ಲಿ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ಸುಗಳು ನಿಂತಿವೆ.ದಾವಣಗೆರೆಯಲ್ಲಿ ಇಂದು 6ನೇ ದಿನವೂ ಬಸ್ಸುಗಳು ರಸ್ತೆಗಿಳಿದಿಲ್ಲ. ಮುಷ್ಕರವಿರುವುದು ಗೊತ್ತಾಗಿರುವುದರಿಂದ ಇಂದು ಬಹುತೇಕ ಪ್ರಯಾಣಿಕರು ರಸ್ತೆಗಿಳಿದಿಲ್ಲ. ದಿನನಿತ್ಯದ ಕೆಲಸ ಕಾರ್ಯಗಳು, ಕಚೇರಿಗಳಿಗೆ ಹೋಗಬೇಕಾದವರು ಮಾತ್ರ ಖಾಸಗಿ ಬಸ್ಸು, ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ತಟ್ಟೆ, ಲೋಟ ಚಳವಳಿ: ಸರ್ಕಾರ ತಮ್ಮ ಬೇಡಿಕೆಗಳಿಗೆ ಮಣಿಯುತ್ತಿಲ್ಲ ಎಂದು ತಮ್ಮ ಪ್ರತಿಭಟನೆ, ಮುಷ್ಕರ ತೀವ್ರಗೊಳಿಸುತ್ತಿರುವ ಸಾರಿಗೆ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಇಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು, ತಾಲ್ಲೂಕು ತಹಶಿಲ್ದಾರ್ ಕಚೇರಿ ಮುಂದೆ ತಟ್ಟೆ, ಲೋಟ ಬಡಿದು ಚಳವಳಿ ನಡೆಸುತ್ತಿದ್ದಾರೆ. ಸಾರಿಗೆ ಇಲಾಖೆ ನೌಕರರ ಕುಟುಂಬ ಸದಸ್ಯರು ಈ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. 

ಫಿಟ್ ನೆಸ್ ಸರ್ಟಿಫಿಕೇಟ್: ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಸರ್ಕಾರ ನೌಕರರ ವಿರುದ್ಧ ವಿವಿಧ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದು 55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಸಲ್ಲಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೂಚನೆ ನೀಡಿದ್ದು ಇಂದು ಅದಕ್ಕೆ ಕೊನೆಯ ದಿನವಾಗಿದೆ.

ಮುಷ್ಕರಕ್ಕೆ ಪ್ರಚೋದನೆ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವ ಸಹ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ, ಬಸ್ಸುಗಳ ಕಾರ್ಯಾಚರಣೆಗೆ  ಅಡ್ಡಿಪಡಿಸಿ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ತೊಂದರೆ ಮಾಡುತ್ತಿರುವ ನೌಕರರ "ಅಂತರ ನಿಗಮ ವರ್ಗಾವಣೆ" ಕೋರಿಕೆಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಹೇಳಿದೆ. 

ಹೀಗಾಗಿ ಬಸ್ಸುಗಳ ಕಂಡಕ್ಟರ್ ಮತ್ತು ಚಾಲಕರು ದೇಹದಾರ್ಢ್ಯತೆ ಪ್ರಮಾಣಪತ್ರವನ್ನು ನೀಡಲೇಬೇಕು. ಒಂದು ವೇಳೆ ವಿಫಲವಾದರೆ ಸೇವೆಯಿಂದ ವಜಾ ಮಾಡುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ. 

SCROLL FOR NEXT