ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಹಾನಿಗೊಳಗಾಗಿದ್ದ ಮನೆ ನೆಲಸಮಗೊಳಿಸಿ ಮರುನಿರ್ಮಾಣ ಕಾರ್ಯ ಕೈಗೊಂಡ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

Manjula VN

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಭಸ್ಮಗೊಂಡಿದ್ದ ಮನೆಯನ್ನು ನೆಲಸಮಗೊಳಿಸಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಮರು ನಿರ್ಮಾಣ ಮಾಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ಗಲಭೆಯಿಂದಾಗಿ ಅರ್ಧದಷ್ಟು ಮನೆ ಸುಟ್ಟು ಕರಕಲಾಗಿದೆ. ಹೀಗಾಗಿ ಮನೆಯನ್ನು ನೆಲಸಮಗೊಳಿಸಿ ಮರು ನಿರ್ಮಾಣ ಮಾಡಲಾಗುತ್ತಿದೆ. ಕಳೆದ 9 ತಿಂಗಳುಗಳಿಂದ ನನ್ನ ಕುಟುಂಬ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ. ಗಲಭೆ ಬಳಿಕ ನಾವು ಸಂಬಂಧಿಕರ ಮನೆಯಲ್ಲಿದ್ದೇವೆಂದು ಅಖಂಡ ಶ್ರೀನಿವಾಸ್ ಮೂರ್ತಿಯವರು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರಿಂದ ನನಗೆ ಯಾವುದೇ ರೀತಿಯ ಬೆಂಬಲಗಳೂ ಸಿಕ್ಕಿಲ್ಲ. ಈಗಾಗಲೇ ಸಾಕಷ್ಟು ಬಾರಿ ಅವರನ್ನು ಭೇಟಿ ಮಾಡಿದ್ದೇನೆ, ವೈಯಕ್ತಿಕವಾಗಿಯೂ ಮಾತನಾಡಿದ್ದೇನೆ. ಕೆಪಿಸಿಸಿ ಅಧಅಯಕ್ಷರು ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ಸಂಪತ್ ರಾಜ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಆದರೂ ನನಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೈತಿಕ ಬೆಂಬಲವಿದೆ. ಶೀಘ್ರದಲ್ಲೇ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಲಿದ್ದು, ಡಿಕೆ.ಶಿವಕುಮಾರ್ ಮಾಡುತ್ತಿರುವ ಅನ್ಯಾಯದ ಕುರಿತು ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಿದ್ದಾರೆ. 

ಆಗಸ್ಟ್ 11 ರಂದು ಡಿಜೆಹಳ್ಳಿಯಲ್ಲಿ ಗಲಭೆ ಸೃಷ್ಟಿಯಾಗಿದ್ದು, ಗಲಭೆ ವೇಳೆ ದುಷ್ಕರ್ಮಿಗಳು ಅಖಂಡ ಶ್ರೀನಿವಾಸ ಮೂರ್ತಿಯವರು ಮನೆಗೆ ಬೆಂಕಿ ಹಚ್ಚಿ, ದಾಂಧಲೆ ನಡೆಸಿದ್ದರು. ಪ್ರಕರಣ ಸಂಬಂಧ ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು 400ಕ್ಕೂ ಹೆಚ್ಚು ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಇದಲ್ಲದೆ, ಪ್ರಕರಣ ಸಂಬಂಧ ಹಾನಿಗೊಳಗಾದ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದ್ದು, ನಷ್ಟ ಕುರಿತ ಮಾಹಿತಿ ಕಲೆಹಾಕಲು ಹೈಕೋರ್ಟ್ ಕೂಡ ಕೆಎಸ್ ಕೆಂಪಣ್ಣ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ. 

SCROLL FOR NEXT