ರಾಜ್ಯ

ಸಾರಿಗೆ ಇಲಾಖೆ ನೌಕರರ ಮುಷ್ಕರ ವಾಪಸ್?: ಗೃಹ ಸಚಿವರನ್ನು ಭೇಟಿ ಮಾಡಿ ಸುಳಿವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್

Sumana Upadhyaya

ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಮುಷ್ಕರ ವಿಷಯವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ವಿವರಿಸಿದ್ದೇನೆ. ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿರುವುದರಿಂದ ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರ ಮುಷ್ಕರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಸಾರಿಗೆ ಸಚಿವರು ಆರೋಗ್ಯ ಕಾರಣಕ್ಕೆ ಊರಿನಲ್ಲಿದ್ದಾರೆ, ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದಾರೆ, ಇನ್ನು ಕೆಲವು ದಿನಗಳಲ್ಲಿ ಅವರು ಮರಳುತ್ತಾರೆ, ಹೀಗಾಗಿ ಇಂಥ ಸಮಯದಲ್ಲಿ ಮುಷ್ಕರ ಹಿಂತೆಗೆದುಕೊಳ್ಳಲು ಸಾಧ್ಯವೇ ಎಂದು ಕೇಳಿದ್ದಾರೆ, ಈ ಬಗ್ಗೆ ನಾವು ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಮುಷ್ಕರ ಹಿಂತೆಗೆದುಕೊಳ್ಳುವಂತೆ ಗೃಹ ಸಚಿವರು ಮಾಡಿಕೊಂಡ ಮನವಿ ಬಗ್ಗೆ ಸಾರಿಗೆ ಇಲಾಖೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. 

ಬೊಮ್ಮಾಯಿ ಹೇಳಿಕೆ:

ಸಾರಿಗೆ ನೌಕರರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಾರಿಗೆ ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಿಂದಿರುಗುವಂತೆ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಗೆ ತಿಳಿ ಹೇಳಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಕೋಡಿಹಳ್ಳಿ ಚಂದ್ರಶೇಖರ್ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕೋವಿಡ್ ಸಂಕಷ್ಟದಲ್ಲಿ ಜನರಿದ್ದು, ಇಂತಹ ಸಂದರ್ಭದಲ್ಲಿ ಮುಷ್ಕರ ಸರಿಯಲ್ಲ ಎಂದು ಹೇಳಿದ್ದೇನೆ. ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರದ ವಿಚಾರವಾಗಿ ಅಲ್ಲದೇ ಬೇರೆ ವಿಚಾರವಾಗಿ ಚರ್ಚಿಸಲು ಬಂದಿದ್ದರು. ಇದರ ಜೊತೆಗೆ ಸಾರಿಗೆ ಮುಷ್ಕರದ ಬಗ್ಗೆ ಮಾತನಾಡಿದೆ.ಇದು ಸಮಯ ಸಂದರ್ಭವಲ್ಲ ಕೋವಿಡ್ ಇದೆ ಜನ ಕಷ್ಟದಲ್ಲಿದ್ದಾರೆ. ಸದ್ಯಕ್ಕೆ ಮುಷ್ಕರವನ್ನ ಸ್ಥಗಿತಗೊಳಿಸಿ ಕೆಲಸಕ್ಕೆ ವಾಪಸ್ ಆಗುವಂತೆ ಮನವಿ ಮಾಡಿರುವುದಾಗಿ ಹೇಳಿದರು. ಸಾರಿಗೆ ಸಚಿವರ ಜೊತೆ ಚರ್ಚಿಸಿ ಎಂದಿದ್ದೇನೆ.ಒಂದು ಗುಡ್ ವಿಲ್ ಆಗಲಿದೆ ಎಂದು ತಿಳಿಸಿದ್ದೇನೆ. ಮುಷ್ಕರ ಹೆಸರಿನಲ್ಲಿ ಕಾನೂನು ಕ್ರಮ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದರು.

SCROLL FOR NEXT