ಬೆಂಗಳೂರು: ವ್ಯವಹಾರದ ಮಾತುಕತೆ ವೇಳೆ ತನ್ನ ಬ್ಯುಸಿನೆಸ್ ಪಾರ್ಟನರ್ ಲೈಂಗಿಕ ಕಿರುಕುಳ ಎಸಗಿದ ಎಂದು 29 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಕೋರಮಂಗಲ ನಿವಾಸಿ ಪ್ರೀತಿ(ಹೆಸರು ಬದಲಾಯಿಸಲಾಗಿದೆ) ಕೋರಮಂಗಲ ಠಾಣೆಯಲ್ಲಿ ಕಳೆದ ವಾರ ದೂರು ನೀಡಿದ್ದಾರೆ.
2016 ರಲ್ಲಿ ಪ್ರೀತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಅರ್ಜಿತ್ ಮಜುಂದಾರ್ ನನ್ನು ಭೇಟಿ ಮಾಡಿದ್ದರು, ಆತ ಕೂಡ ಅದೇ ಕಂಪನಿ ಉದ್ಯೋಗಿಯಾಗಿದ್ದ.
2017 ರಲ್ಲಿ ಪ್ರೀತಿ ಕಂಪನಿಯ ಉದ್ಯೋಗ ತೊರೆದು ಆರೋಪಿ ಜೊತೆ ಸೇರಿ ಸ್ವಂತ ಕಂಪನಿ ತೆರೆಯಲು ನಿರ್ಧರಿಸಿದರು. 2018 ರಲ್ಲಿ ಕೋರಮಂಗಲದಲ್ಲಿ ಸಾವಯವ ಹತ್ತಿ ಬಟ್ಟೆ ಕಂಪನಿ ಆರಂಭಿಸಿದರು.
ನಾನು 23 ಲಕ್ಷ ಬಂಡವಾಳ ಹೂಡಿದ್ದೆ, ಆತ ಯಾವುದೇ ಹಣ ನೀಡಿರಲಿಲ್ಲ, ಕಚೇರಿ ವೇಳೆ ಆತ ಅಸಭ್ಯವಾಗಿ ವರ್ತಿಸಲು ಆರಂಭಿಸಿದ, ಕಂಪನಿ ಸಂಬಂಧ ಚರ್ಚಿಸುವಾಗ ನನ್ನನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ, ನಾನು ಇದನ್ನು ವಿರೋಧಿಸಿ ಎಚ್ಚರಿಕೆ ನೀಡಿದ್ದೆ.
ನಾನು ಅವನನ್ನು ಎದುರಿಸಿದಾಗ, ಅವನು ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆತನ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದ್ದಾರೆ.