ರಾಜ್ಯ

ವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಕೊರೋನಾ ಲಸಿಕೆ: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ 

Sumana Upadhyaya

ಬೆಂಗಳೂರು: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಆರಂಭವಾಗುವ ಕೋವಿಡ್ ಲಸಿಕೆ ಅಭಿಯಾನದಲ್ಲಿ ವಿಶೇಷ ಚೇತನರಿಗೆ ಆದ್ಯತೆ ನೀಡುವಂತೆ ಕೋರಿ ಕರ್ನಾಟಕ ವಿಕಲಚೇತನರ ರಕ್ಷಣ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಪಟ್ಟಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ಎರಡೂ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ. ಮುಂದಿನ ವಿಚಾರಣೆಯನ್ನು ವಿಶೇಷವಾಗಿ ನಾಳೆ ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.

ಮೇ 1 ರಿಂದ ಕೇಂದ್ರವು ಕೋವಿಡ್ -19 ವ್ಯಾಕ್ಸಿನೇಷನ್‌ನ ಮೂರನೇ ಹಂತವನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆಲ್ಲರಿಗೂ ನೀಡಲು ಮುಂದಾಗಿದೆ. ಆದಾಗ್ಯೂ, ವಿಶೇಷ ಚೇತನ ವ್ಯಕ್ತಿಗಳಿಗೆ ವಿಶೇಷ ಆದ್ಯತೆಯ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ಮಾಡಿಲ್ಲ. ವಿಶೇಷ ಚೇತನರಿಗೆ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಕಾನೂನಿನಲ್ಲಿ ಸರ್ಕಾರಕ್ಕೆ ವಿಶೇಷ ಅಧಿಕಾರವಿದ್ದರೂ ಲಸಿಕೆ ಅಭಿಯಾನದಲ್ಲಿ ಅದನ್ನು ಉಲ್ಲೇಖಿಸಿಲ್ಲ ಎಂದು ವಿಕಲಚೇತನರ ರಕ್ಷಣ ವೇದಿಕೆ ಹೇಳಿದೆ.

ವಿಶೇಷ ಚೇತನರ ಆರೋಗ್ಯಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಕೆಲವು ವಿಶೇಷ ಚೇತನರಿಗೆ ಕೋವಿಡ್ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಲು ಸಾಧ್ಯವಾಗಲಿಕ್ಕಿಲ್ಲ, ಹೀಗಾಗಿ ಅವರು ಕೋವಿಡ್ ಸೋಂಕಿಗೆ ಒಳಗಾಗುವ ಬಹಳ ಅಪಾಯದಲ್ಲಿರುತ್ತಾರೆ. ಎಲ್ಲಾ ವಿಶೇಷ ಚೇತನರಿಗೂ ಆರಂಭದಲ್ಲಿಯೇ ಲಸಿಕೆ ನೀಡಿದರೆ ಅವರ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಆದರೆ ಲಸಿಕೆ ವಿಭಾಗದಿಂದ ವಿಶೇಷ ಚೇತನರನ್ನು ಆದ್ಯತೆಯಿಂದ ಹೊರಗೆ ಇಡುವುದು ಸರ್ಕಾರದ ನಿರಂಕುಶ ಧೋರಣೆಯನ್ನು ಸೂಚಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಜಿಲ್ಲೆಗಳಲ್ಲಿ ಸರ್ಕಾರ ವಿಶೇಷ ಚೇತನರಿಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ ಮೇ 1ರಿಂದ ಆದ್ಯತೆ ಮೇರೆಗೆ ಲಸಿಕೆ ನೀಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ವಿಶೇಷ ಚೇತನ ವೇದಿಕೆ ಅರ್ಜಿಯಲ್ಲಿ ಹೇಳಿದೆ.

SCROLL FOR NEXT