ರಾಜ್ಯ

ಸಹಾಯವಾಣಿ 108 ರಿಂದ ಸಾರ್ವಜನಿಕರಿಗೆ ಯಾವುದೇ ಸಹಾಯವಾಗುತ್ತಿಲ್ಲ: ಬಿಬಿಎಂಪಿ ಅಧಿಕಾರಿಗಳೇ ಸಾಕ್ಷಿ!

Srinivas Rao BV

ಬೆಂಗಳೂರು: ಕೋವಿಡ್-19  ಸಾಂಕ್ರಾಮಿಕದಿಂದ ತಮ್ಮ ಮನೆಯವರ ಜೀವ ಉಳಿಸಲು ಬೆಡ್ ಹುಡುಕುವುದಕ್ಕಾಗಿ ಅದೆಷ್ಟೋ ಮಂದಿ ಪರದಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನೆರವು ನೀಡಲೆಂದೇ ಪ್ರಾರಂಭಿಸಲಾಗಿರುವ 108 ಸಹಾಯವಾಣಿ ನಿಜವಾಗಿಯೂ ಸಾರ್ವಜನಿಕರಿಗೆ ಸಹಾಯ ಆಗುತ್ತಿಲ್ಲ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಸ್ವತಃ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸಹಾಯವಾಣಿ 108ರಲ್ಲಿ ನೂರೆಂಟು ಸಮಸ್ಯೆಗಳಿರುವುದು ಅನುಭವಕ್ಕೆ ಬಂದಿದೆ. ಬೆಡ್ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳಿಗೆ ಸ್ವತಃ ಅನುಭವಕ್ಕೆ ಬಂದಿದೆ. 

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ರಿಯಾಲಿಟಿ ಚೆಕ್ ಭಾಗವಾಗಿ 108 ಕ್ಕೆ ಕರೆ ಮಾಡಿ, ಪರಿಸ್ಥಿತಿಯನ್ನು ಕಂಡ ಗೌರವ್ ಗುಪ್ತಾ ಅವರಿಗೆ ತೀವ್ರ ಆಘಾತ ಕಾದಿತ್ತು. ಪ್ರಾರಂಭದಲ್ಲಿ ಯಾರೂ ಕರೆಯನ್ನು ಸ್ವೀಕರಿಸಲಿಲ್ಲ. ಹಲವು ಯತ್ನಗಳ ಬಳಿಕ ಟೆಲಿಕಾಲರ್ ಕರೆ ಸ್ವೀಕರಿಸಿದರು. ಈ ವೇಳೆ :ಯಾರೂ ಕರೆ ಸ್ವೀಕರಿಸುವುದಿಲ್ಲ ಏಕೆ"? ಎಂಬ ಗೌರವ್ ಗುಪ್ತಾ ಅವರ ಪ್ರಶ್ನೆಗೆ "ಈಗ ಸ್ವೀಕರಿಸಿದೆನಲ್ಲಾ...: ಎಂಬುದು ಆ ಕಡೆಯಿಂದ ಬಂದ ಉತ್ತರವಾಗಿತ್ತು.

ಗೌರವ್ ಗುಪ್ತಾ ಅವರನ್ನು 108 ಸಹಾಯವಾಣಿಯ ಕರೆ ಸ್ವೀಕರಿಸಿದ ವ್ಯಕ್ತಿ ಗುರುತಿಸಲು ಸಾಧ್ಯವಾಗಲಿಲ್ಲವಾದ್ದರಿಂದ ಆತ ಸಾಮಾನ್ಯರೊಂದಿಗೆ ಮಾತನಾಡುವಂತೆಯೇ ಮಾತನಾಡಿದ. ನಂತರ ತಮ್ಮ ಗುರುತನ್ನು ಹೇಳಿದ ಗುಪ್ತಾ ಅವರು ಅಗತ್ಯವಿರುವವರಿಗೆ ಸಕಾಲದಲ್ಲಿ ಸೇವೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ಆದರೆ ಟೆಲಿಕಾಲರ್ ಸಮರ್ಥನೆ ನೀಡಿ, "ಈ ರೀತಿಯ ಸಹಾಯ ಸಿಗದೇ ಇರುವಂತಹ ಯಾವುದೇ ಘಟನೆ ನಡೆದೇ ಇಲ್ಲ" ಎಂದು ಉತ್ತರಿಸಿದರು. ಅದೇ ಕರೆಯಲ್ಲಿದ್ದ ವರದಿಗಾರರು ಕರೆಯನ್ನು ಸ್ವೀಕರಿಸದ ಹಲವು ಉದಾಹರಣೆಗಳನ್ನು ನೀಡಿದ ಬಳಿಕ, "ತಾಂತ್ರಿಕ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ" ಎಂಬ ಸಿದ್ಧ ಉತ್ತರ ಬಂದಿತ್ತು. 

ಇದಿಷ್ಟೇ ಅಲ್ಲ, ಮತ್ತೊಂದು ಘಟನೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಹಿರಿಯ ಬಿಬಿಎಂಪಿ ಆರೋಗ್ಯ ಅಧಿಕಾರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಸಹೋದ್ಯೋಗಿಗೆ ತುರ್ತಾಗಿ ಬೆಡ್ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು ಕೇಳಿದಾಗ, "ಈಗ ನಾವು ಐಸಿಯು ನಲ್ಲಿದ್ದೇವೆ, ಬೆಡ್ ಬುಕ್ ಮಾಡುವುದಕ್ಕಾಗಿ ಕೇಳಿ ದಯವಿಟ್ಟು ನಮಗೆ ಮುಜುಗರ ಉಂಟುಮಾಡಬೇಡಿ" ಎಂಬ ಉತ್ತರ ಅಧಿಕಾರಿಯಿಂದ ಬಂದ ಘಟನೆಯೂ ವರದಿಯಾಗಿದೆ. 

108 ಸಹಾಯವಾಣಿಗೆ ಸಂಬಂಧಿಸಿದಂತೆ ಸಮಸ್ಯೆ ಇರುವುದನ್ನು 108 ರ ಇನ್-ಚಾರ್ಜ್ ನೋಡಲ್ ಅಧಿಕಾರಿ ತುಷಾರ್ ಗಿರಿನಾಥ್ ಒಪ್ಪಿಕೊಂಡಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಹಾಗೂ ಐಎಲ್ಐ/ಎಸ್ಎಆರ್ ಐ ರೋಗಿಗಳಿಗೆ 108 ರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಾಸ್ಟರ್ ಬೆಡ್ ಮ್ಯಾನೇಜ್ಮೆಂಟ್ ಫೆಸಿಲಿಟಿಯನ್ನು ಸ್ಥಾಪಿಸಲಾಗಿದೆ. 

ಎಸ್ ಆರ್ ಎಫ್ಐಡಿ ನಂಬರ್ ಜನರೇಟ್ ಆಗಿ ಪೇಷೆಂತ್ ಕೋಡ್ (ಬಿಯು-) ಸಿಗದೇ ರೋಗಿಯ ಆರೋಗ್ಯ ಹದಗೆಡುತ್ತಿದ್ದರೆ 108 ರ ಸಹಾಯದಿಂದ ಬೆಡ್ ಬುಕ್ ಮಾಡಬಹುದಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ. ಎಸ್ ಆರ್ ಎಫ್ ಐ ಡಿ ನಂಬರ್ ಇದ್ದರೆ ಅಥವಾ ಐಎಲ್ಐ ಅಥವಾ ಎಸ್ಎಆರ್ ಐ ರೋಗಿಗಳಾಗಿದ್ದರೆ ಜನರು 1912 ನಂಬರ್ ಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ. 

SCROLL FOR NEXT