ರಾಜ್ಯ

ಸಂದೇಶ ಕಳುಹಿಸುವ ಮುನ್ನ ಗಮನಿಸಿ: ವೈದ್ಯಕೀಯ ಸೌಲಭ್ಯ, ರೆಮೆಡಿಸಿವಿರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸುಳ್ಳು ಮಾಹಿತಿ!

Sumana Upadhyaya

ಮೈಸೂರು: ಕೊರೋನಾ ಸೋಂಕಿತ ರೋಗಿಗಳಿಗೆ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ ಮತ್ತು ರೆಮೆಡಿಸಿವಿರ್ ಔಷಧಿಗೆ ಕೊರತೆ ಉಂಟಾಗಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಗೊಂದಲದ, ಆತಂಕ ಹುಟ್ಟಿಸುವ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ನಾಗರಿಕರ ಭಯ, ಆತಂಕಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಮೈಸೂರಿನ ಪದವೀಧರ ಶಶಾಂಕ್ ತನ್ನ ತಂದೆಗೆ ರೆಮೆಡಿಸಿವಿರ್ ಇಂಜೆಕ್ಷನ್ ಕೆಲ ದಿನಗಳ ಹಿಂದೆ ಕೊಳ್ಳಬೇಕಾಗಿತ್ತು. ಅದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರ ಮೊರೆ ಹೋದರು. ಕೆಲವೇ ನಿಮಿಷಗಳಲ್ಲಿ ಸ್ನೇಹಿತರು ಹಲವು ವ್ಯಕ್ತಿಗಳು ಮತ್ತು ಸಂಘಟನೆಗಳ ಫೋನ್ ನಂಬರ್ ನೀಡಿದರು. ಅವರಿಂದ ರೆಮೆಡಿಸಿವಿರ್ ಔಷಧಿ ಕೊಳ್ಳಲು ಸಹಾಯವಾಗಬಹುದೆಂದು ಹೇಳಿದ್ದರು. ಅವರನ್ನೆಲ್ಲಾ ಕರೆ ಮಾಡಲು ನೋಡಿದಾಗ ಅವೆಲ್ಲಾ ತಪ್ಪು ಸಂಖ್ಯೆಗಳಾಗಿದ್ದು ಯಾರಿಗೂ ಫೋನ್ ಹೋಗುತ್ತಿರಲಿಲ್ಲ ಎಂದು ತಮ್ಮ ಅನುಭವವನ್ನು ವಿವರಿಸಿದರು.

ಸೋಷಿಯಲ್ ಮೀಡಿಯಾ ಮೂಲಕ ತುರ್ತಾಗಿ ಬೆಡ್ ವ್ಯವಸ್ಥೆಯಾಗಬೇಕು, ಆಕ್ಸಿಜನ್ ಬೇಕು, ರೆಮೆಡಿಸಿವಿರ್ ಬೇಕು ಎಂದು ಕೇಳುವವರು ಸಾಕಷ್ಟು ಮಂದಿ ಇದ್ದಾರೆ. ಆನ್ ಲೈನ್ ಮೂಲಕ ಕೋರಿ ಸಹಾಯ ಪಡೆಯುವವರು ಇದ್ದಾರೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡುತ್ತವೆ. ದಾಖಲೆಯಿಲ್ಲದ, ಬಳಕೆಯಿಲ್ಲದ ಸಂಪರ್ಕ ಸಂಖ್ಯೆಗಳು ಹರಿದಾಡುತ್ತಿವೆ. ಕೆಲವು ದುಷ್ಕರ್ಮಿಗಳು ಬೇಕೆಂದೇ ಸತ್ಯವಾಗಿರುವ ಪೋಸ್ಟ್ ಗಳನ್ನು, ದೂರವಾಣಿ ಸಂಖ್ಯೆಗಳನ್ನು ತಪ್ಪು ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಾರೆ. ಇದು ಮತ್ತಷ್ಟು ತೊಂದರೆಯನ್ನುಂಟುಮಾಡುತ್ತವೆ.

ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಹಲವು ಸಂಖ್ಯೆಗಳಿಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಕರೆ ಮಾಡಿದಾಗ ಅದು ಒಂದೋ ಬೇರೆ ಸಂಬಂಧಪಡದ ವ್ಯಕ್ತಿಗಳಿಗೆ ಹೋಗುತ್ತಿತ್ತು ಅಥವಾ ಸಂಖ್ಯೆ ಬಳಕೆಯಲ್ಲಿಲ್ಲ ಎಂದು ಹೇಳುತ್ತಿತ್ತು. ಆಕ್ಸಿಜನ್ ಸಿಲೆಂಡರ್ 400 ರೂಪಾಯಿ ಸಿಗುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿವೆ, ರೆಮೆಡಿಸಿವಿರ್ ಕೂಡ ಅಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಬರುತ್ತಿವೆ, ಇವೆಲ್ಲಾ ಸುಳ್ಳಾಗಿರುತ್ತದೆ ಎಂದು ಅನುಭವಿಗಳು ಹೇಳುತ್ತಾರೆ. 

ಇತ್ತೀಚೆಗೆ ಡಿಜಿಟಲ್ ಬಳಕೆ ಹೆಚ್ಚಾಗಿರುವುದರಿಂದ, ಹಲವು ಮಂದಿ ಸೋಷಿಯಲ್ ಮೀಡಿಯಾ ಬಳಸುವುದರಿಂದ ಹೀಗೆ ಸಾಂಕ್ರಾಮಿಕ ಸಮಯದಲ್ಲಿ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ ಎಂದು ಸೈಬರ್ ಕ್ರೈಂ ವಿಭಾಗ ಪೊಲೀಸರು ಹೇಳುತ್ತಾರೆ.

ಕೇಂದ್ರೀಯ ಸಂಖ್ಯೆಯನ್ನು ತಂದು ಅದನ್ನು ಜಿಲ್ಲಾಡಳಿತ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಬೇಕು, ಇದರಿಂದ ವೈದ್ಯಕೀಯ ಸೌಲಭ್ಯದ ಅಗತ್ಯವಿರುವವರಿಗೆ ಸಹಾಯವಾಗುತ್ತದೆ ಎಂದು ಸೋಷಿಯಲ್ ಮೀಡಿಯಾ ತಂತ್ರಜ್ಞರು ಹೇಳುತ್ತಾರೆ.

SCROLL FOR NEXT