ರಾಜ್ಯ

ನಗರದಲ್ಲಿ ಹೆಚ್ಚಿದ ಕೊರೋನಾ: ಆನ್'ಲೈನ್ ತರಗತಿ ಆರಂಭಕ್ಕೆ ಬೆಂಗಳೂರು ವಿವಿ ನಿರ್ಧಾರ

Manjula VN

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಇದೀಗ ಮುಂದಿನ ಸೆಮಿಸ್ಟರ್‌ಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. 

ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ವೇಣುಗೋಪಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ವಿವಿ ವ್ಯಾಪ್ತಿಯ ಎಲ್ಲಾ ಸಂಯೋಜಿತ ಕಾಲೇಜುಗಳು ಸ್ನಾತಕೋತ್ತರ ಕೋರ್ಸ್'ನ 4ನೇ ಸೆಮಿಸ್ಟರ್ ತರಗತಿಗಳನ್ನು ಆನ್'ಲೈನ್ ನಲ್ಲಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಒಂದನೇ ಸೆಮಿಸ್ಟರ್ ಆನ್'ಲೈನ್ ಆರಂಭಿಸುವಂತೆ ಈ ಹಿಂದೆಯೇ ವಿವಿ ಸೂಚನೆ ನೀಡಿತ್ತು. ಸೋಂಕು ವಿಸ್ತರಿಸುತ್ತಿರುವುದರಿಂದ ಇದೀಗ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಮೇ.5ರಿಂದ ತರಗತಿಗಳನ್ನು ಆನ್'ಲೈನ್ ನಲ್ಲಿ ನಡೆಸಲು ವಿವಿ ಸೂಚಿಸಿದೆ. 

ಈ ನಡುವೆ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಏ.28ರಿಂದ ಮೇ 11ರವರೆಗೆ ವಿವಿಯಲ್ಲಿ ಅಭಿಯಂತರ ವಿಭಾಗ, ಆರೋಗ್ಯ ವಿಭಾಗ, ಸಾರಿಗೆ ವಿಭಾಗ ಹೊರತು ಪಡಿಸಿ ಉಳಿದ ಎಲ್ಲ ವಿಭಾಗದವರು ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ಈ ವೇಳೆ ಎಲ್ಲ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯನ್ನು ಮೇಲಧಿಕಾರಿಗಳಿಗೆ ನೀಡಬೇಕು. ಈ ಅವಧಿಯಲ್ಲಿ ಬೋಧಕೇತರ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ವಿವಿ ಸಿಬ್ಬಂದಿ ಸೇವೆ ಅಗತ್ಯವಿದ್ದಾಗ ಸಂಬಂಧಪಟ್ಟ ವಿಭಾಗ, ಕಚೇರಿಯ ಮುಖ್ಯಸ್ಥರು ಇಚ್ಛಿಸಿದಲ್ಲಿ ಅವರು ಸೂಚಿಸುವ ಅಧಿಕಾರಿ, ಬೋಧಕ, ಬೋಧಕೇತರ ನೌಕರರು ಯಾವುದೇ ಕಾರಣ ನೀಡದೆಯೇ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವೇಣುಗೋಪಾಲ್‌ ನಿರ್ದೇಶಿಸಿದ್ದಾರೆ.

SCROLL FOR NEXT