ರಾಜ್ಯ

ಕಿಚನ್ ನಿಂದ ಮನೆಗೆ: ಗ್ರಾಹಕರಿಗೆ ನೇರವಾಗಿ ಆಹಾರ ತಲುಪಿಸುತ್ತಿರುವ ಹೊಟೇಲ್ ಗಳು

Sumana Upadhyaya

ಬೆಂಗಳೂರು: ಕೆಲ ದಿನಗಳ ಹಿಂದೆ ಡೊಟ್ಪೆ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಗ್ರಾಹಕರಲ್ಲಿ ನೇರವಾಗಿ ರೆಸ್ಟೋರೆಂಟ್ ಗಳಿಂದ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು ಎಂದು ಮನವಿ ಮಾಡಿಕೊಂಡಿತ್ತು. ತಮ್ಮ ವ್ಯಾಪಾರ ಉದ್ದೇಶಕ್ಕೆ ಡೊಟ್ಪೆ ಮಾಡಿಕೊಂಡ ಈ ವಿಡಿಯೊ ಹಲವು ರೆಸ್ಟೋರೆಂಟ್ ಗಳ ವ್ಯಾಪಾರದ ಕಾರ್ಯವೈಖರಿ ಮೇಲೆ ಪರಿಣಾಮ ಬೀರಿದೆ.

ಶೆಫ್ ಮನು ಚಂದ್ರ ಈ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಕೊರೋನಾ ಕರ್ಫ್ಯೂ ಸಮಯದಲ್ಲಿ ನಗರದ ಹಲವು ರೆಸ್ಟೋರೆಂಟ್ ಗಳು ಫುಡ್ ಡೆಲಿವರಿ ಆಪ್ ಗಳ ಮೊರೆ ಹೋಗದೆ ನೇರ ಪೂರೈಕೆ ಸೌಲಭ್ಯದ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡಲು ಆರಂಭಿಸಿವೆ.

ಬಿಎಲ್ ಆರ್ ಬ್ರೀವಿಂಗ್ ಕಂಪೆನಿಯ ಸ್ಥಾಪಕ ಪ್ರಸನ್ನ ಕುಮಾರ್, ರೆಸ್ಟೋರೆಂಟ್ ಗಳು ತಮ್ಮದೇ ಆದ ಗ್ರಾಹಕ ಮೂಲವನ್ನು ಹೊಂದಿರುವುದು ಮುಖ್ಯವಾಗುತ್ತದೆ. ಆಗ್ರೆಗೇಟರ್ ಗಳ ಮೂಲಕ ಹೋದರೆ ಗ್ರಾಹಕರ ನಿಷ್ಠಾವಂತಿಕೆ ಮೇಲೆ ನಂಬಿಕೆಯಿರುವುದಿಲ್ಲ ಎನ್ನುತ್ತಾರೆ.

ನೇರವಾಗಿ  ಗ್ರಾಹಕರಿಗೆ ಆಹಾರವನ್ನು ಪೂರೈಸುವುದರಿಂದ ರೆಸ್ಟೋರೆಂಟ್ ಗಳಿಗೆ ಕಮಿಷನ್ ಹೊರೆ ಬೀಳುವುದಿಲ್ಲ, ರೆಸ್ಟೋರೆಂಟ್ ಗಳ ಸಿಬ್ಬಂದಿಯ ಉದ್ಯೋಗ ಸಹ ಈ ಕೊರೋನಾ ಸಂಕಷ್ಟ ಸಮಯದಲ್ಲಿ ಉಳಿಯುತ್ತದೆ ಎನ್ನುತ್ತಾರೆ. ಫುಡ್ ಡೆಲಿವರಿ ಆಪ್ ಗಳು ಶೇಕಡಾ 20ರಿಂದ 25ರಷ್ಟು ಆಹಾರಗಳನ್ನು ಗ್ರಾಹಕರಿಗೆ ಸರಬರಾಜು ಮಾಡಲು ರೆಸ್ಟೋರೆಂಟ್ ಗಳಿಂದ ಹಣ ಕೇಳುತ್ತವೆ. ಇದರಿಂದ ರೆಸ್ಟೋರೆಂಟ್ ಗಳಿಗೆ ಬರುವ ಆದಾಯದಲ್ಲಿ ಕಡಿಮೆಯಾಗುತ್ತದೆ. ಕೊನೆಗೆ ಗ್ರಾಹಕರ ಮೇಲೆ ಕೂಡ ಅಧಿಕ ಬೆಲೆಯ ಹೊರೆ ಬೀಳುತ್ತದೆ ಎಂದು ಪ್ರಸನ್ನ ಕುಮಾರ್ ಹೇಳುತ್ತಾರೆ.

ಕಳೆದ ವರ್ಷ ಕೊರೋನಾ ಮೊದಲ ಲಾಕ್ ಡೌನ್ ಸಮಯದಲ್ಲಿ ಫುಡ್ ಡೆಲಿವರಿ ಆಪ್ ಗಳು ಸಾಕಷ್ಟು ಕೆಲಸ ಮಾಡಿದ್ದವು. ಆದರೆ ಈ ಬಾರಿ ರೆಸ್ಟೋರೆಂಟ್ ಗಳು ತಮ್ಮ ಸಿಬ್ಬಂದಿ ಮೂಲಕವೇ ಗ್ರಾಹಕರಿಗೆ ಆಹಾರ ಪೂರೈಸಲು ನೋಡುತ್ತಿವೆ. ಸ್ವಿಗ್ಗಿ, ಝೊಮ್ಯಾಟೊದಂತಹ ಆನ್ ಲೈನ್ ಫುಡ್ ಡೆಲಿವರಿ ಆಪ್ ಗಳ ಜೊತೆ ಸ್ಪರ್ಧೆಗಿಳಿಯುವುದು ಅಷ್ಟು ಸುಲಭವಲ್ಲ. ಆದರೂ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿ ನಾವೇ ನೇರವಾಗಿ ಗ್ರಾಹಕರ ಜೊತೆ ಸಂಪರ್ಕ ಹೊಂದಲು ನೋಡುತ್ತಿದ್ದೇವೆ ಎನ್ನುತ್ತಾರೆ ಕೆಫೆಯ ಸಹ ಸ್ಥಾಪಕಿ ರೆಹನಾ ನಗಾರಿಯಾ.

SCROLL FOR NEXT