ರಾಜ್ಯ

ಕೊರೋನಾ ಕರ್ಫ್ಯೂ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಜಿಲ್ಲಾಡಳಿತದ ಜವಾಬ್ದಾರಿ: ಸಿಎಂ ಯಡಿಯೂರಪ್ಪ ಆದೇಶ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿತರಿದ್ದು ಕೊರೋನಾ ಎರಡನೇ ಅಲೆ ತೀವ್ರತೆಯನ್ನು ತಗ್ಗಿಸಲು ರಾಜ್ಯ ಸರ್ಕಾರ ಮೇ 12ರವರೆಗೆ ಕೊರೋನಾ ಕರ್ಫ್ಯೂವನ್ನು ಹೇರಿದೆ.

ಮೊನ್ನೆ ಮಂಗಳವಾರ ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಜಾರಿಗೆ ಬಂದಿರುವ ಕೊರೋನಾ ಕರ್ಫ್ಯೂ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಜ್ಞರೊಂದಿಗೆ ವೀಡಿಯೋ ಸಂವಾದ ನಡೆಸಿದರು.

ಸಭೆಯಲ್ಲಿ ಸೋಂಕು ನಿಯಂತ್ರಣ ಕ್ರಮಗಳು, ಸೋಂಕಿತರಿಗೆ ಚಿಕಿತ್ಸೆ, ಆಕ್ಸಿಜನ್, ಐಸಿಯು, ಹಾಸಿಗೆಗಳು, ಇತರ ಅಗತ್ಯ ಔಷಧಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಹಾಗೆಯೇ, ಲಸಿಕೆ ವಿತರಣೆ ಬಗ್ಗೆಯೂ ಚರ್ಚೆ ನಡೆಸಿ ಅಗತ್ಯ ಸೂಚನೆಗಳನ್ನು ಸಿಎಂ ನೀಡಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿಗಳು ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಯಾವ ರೀತಿ ಕೊರೋನಾ ಕರ್ಫ್ಯೂ ನಿಯಮವನ್ನು ಜನರು ಪಾಲಿಸುತ್ತಿದ್ದಾರೆ, ವಾಹನಗಳು, ಜನರ ಸಂಚಾರ ಯಾವ ರೀತಿ ಇದೆ, ಕರ್ಫ್ಯೂವನ್ನು ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆಯೇ ಎಂದು ಮಾಹಿತಿ ಪಡೆದುಕೊಂಡಿದ್ದಾರೆ.

ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಜನರು ಈ ಬಾರಿ ನಿರ್ಬಂಧವನ್ನು ಬೇಕಾಬಿಟ್ಟಿ ತೆಗೆದುಕೊಂಡಿದ್ದಾರೆ, ರಸ್ತೆಗಳಲ್ಲಿ ಜನರು ಆರಾಮಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿಗಳು ವಾಹಿನಿಗಳಲ್ಲಿ ಬರುತ್ತಿವೆ, ಅಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದಾರೆ, ಜಿಲ್ಲೆಗಳಲ್ಲಿ ಸರಿಯಾಗಿ ತಪಾಸಣೆ ಮಾಡುತ್ತಿಲ್ಲವೇ ಎಂದು ಅಧಿಕಾರಿಗಳನ್ನು ಸಭೆಯಲ್ಲಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇ 12ರವರೆಗೆ ಕೊರೋನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲೇಬೇಕು, ಇಲ್ಲದಿದ್ದರೆ ಕರ್ಫ್ಯೂವನ್ನು ವಿಸ್ತರಿಸಬೇಕಾಗುತ್ತದೆ, ಅದು ಅಧಿಕಾರಿಗಳು ಮತ್ತು ಜನರ ಕೈಯಲ್ಲಿದೆ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾಡಳಿತಗಳ ಜವಾಬ್ದಾರಿ: ಕೋವಿಡ್-19 ನಿಯಂತ್ರಣಕ್ಕೆ ಜಾರಿಗೊಳಿಸಿರುವ ಕೊರೋನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಬಿಟ್ಟಿದ್ದು. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಜನರು ಮನೆಬಿಟ್ಟು ಹೊರಬರುತ್ತಾರೆಯೇ, ಅದರಿಂದಾಚೆ ಹೊರಗೆ ಸುಮ್ಮನೆ ಜನರು ಓಡಾಡುತ್ತಾರೆಯೇ, ಕೊರೋನಾ ನಿಯಮ, ಮಾರ್ಗಸೂಚಿ ಪಾಲಿಸುತ್ತಾರೆಯೇ ಎಂದು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಭೆಯಲ್ಲಿ ಆದೇಶ ಹೊರಡಿಸಿದ್ದಾರೆ. 

SCROLL FOR NEXT