ರಾಜ್ಯ

ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಕೊರತೆ: ವಿಮಾನದಲ್ಲಿ ತೆರಳಿ ಖುದ್ದು ಔಷಧಿ ತಂದ ಸಂಸದ ಉಮೇಶ್ ಜಾಧವ್!

Manjula VN

ಕಲಬುರಗಿ: ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಕೊರತೆಯುಂಟಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸಂಸದ ಡಾ.ಉಮೇಶ್ ಜಾಧವ್ ಅವರು, ಬೆಂಗಳೂರಿಗೆ ಭೇಟಿ ನೀಡಿ ವಿಮಾನದಲ್ಲಿ ಇಂಜೆಕ್ಷನ್ ಖುದ್ದಾಗಿ ತೆಗೆದುಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ. 

ಬೆಂಗಳೂರಿನಲ್ಲಿರುವ ಡ್ರಗ್ ಕಂಟ್ರೋಲ್ ಮುಖ್ಯಾಲಯಕ್ಕೆ ಖುದ್ದಾಗಿ ಭೇಟಿ ನೀಡಿದ ಉಮೇಶ್ ಅವರು, ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್'ಗೆ ತೆರಳಿ ಇಂಜೆಕ್ಷನ್ ವಯಲ್ ಗಳನ್ನು ತೆಗೆದುಕೊಂಡು ವಿಮಾನದ ಮೂಲಕವೇ ತಾವೇ ಕಲಬುರಿಗೆಗ ತಂದು ಇಲ್ಲಿನ ಔಷಧ ನಿಯಂತ್ರಕರಿಗೆ ಒಪ್ಪಿಸಿದ್ದಾರೆ. 

ಸಂಸದರ ಸಮಯಕ್ಕೆ ಸರಿಯಾದಂತಹ ನಡೆಯಿಂದಾಗಿ ರೆಮ್ಡೆಸಿವಿರ್ ತುರ್ತು ಅಗತ್ಯವಿದ್ದ ರೋಗಿಗಳಿಗೆ ಈ ಇಂಜೆಕ್ಷನ್ ತಕ್ಷಣಕ್ಕೆ ದೊರಕಿದಂತಾಗಿದೆ. 

ಕಲಬುರಗಿಯ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ. ದಾಸ್ತಾನು ಇಲ್ಲವೆಂದು ಸಹಾಯಕ ಡ್ರಗ್ ಕಂಟ್ರೋಲರ್ ಗಮನಕ್ಕೆ ತಂದಾಗ ಮಂಗಳವಾರ ರಾತ್ರಿ 1 ಗಂಟೆಗೇ ಬೆಂಗಳೂರಿನ ಡ್ರಗ್ ಕಂಟ್ರೋಲರ್ ಮುಖ್ಯಾಲಯದಲ್ಲಿರುವ ವಾರ್ ರೂಮ್'ಗೆ ಧಾವಿಸಿ ತುರ್ತು ಅಗತ್ಯಕ್ಕಾಗಿ 350 ಬಾಟಲ್ ಗಳನ್ನು ಮಂಜೂರು ಮಾಡಿಸಿ ಮತ್ತು ಇತರ 460 ರೆಮ್ಡೆಸಿವಿರ್ ಇಂಜೆಕ್ಷನ್ ಗಳನ್ನು ಕಲಬುರಗಿಗೆ ತಂದು ಒಪ್ಪಿಸಿದ್ದಾಗಿ ಉಮೇಶ್ ಅವರು ಟ್ವೀಟ್ ಮಾಡಿದ್ದಾರೆ. 

ರೋಗಿಗಳಿಗೆ ಯಾವುದೇ ತೊಂದರೆ ಕಾಡಬಾರದು ಎಂಬ ಉದ್ದೇಶದಿಂದ ಮಂಜೂರಾದ 350 ಇಂಜೆಕ್ಷನ್ ವಯಲ್ ಖುದ್ದು ವಿಮಾನದ ಮೂಲಕ ತಾವೇ ತಂದು ಕಲಬುರಗಿ ಆಡಳಿತಕ್ಕೊಪ್ಪಿಸಿದ್ದಾಗಿ ಸಂಸದರು ಹೇಳಿಕೊಂಡಿದ್ದಾರೆ. 

ರೆಮ್ಡೆಸಿವಿರ್ ಇಂಜೆಕ್ಷನ್ ವಯಲ್ ಗಳು ವಾರ್ ರೂಮ್ ನಿಂದ ಎಂದಿನಂತೆ ರವಾನೆಯಾದಲ್ಲಿ 2 ದಿನ ವಿಳಂಬವಾಗಿ ಜಿಲ್ಲೆಗೆ ತಲುಪುತ್ತಿದ್ದವು. ಆದರೀಗ ಸಂಸದ ಡಾ.ಜಾಧವ್ ಮಧ್ಯಸ್ಥಿಕೆಯಿಂದಾಗಿ 2 ದಿನ ಮೊದಲೇ ಇಂಜೆಕ್ಷನ್ ವಯಲ್ ಗಳು ಕಲಬುರಗಿ ತಲುಪಿದ್ದರಿಂದ ಇಲ್ಲಿ ರೋಗಿಗಳ ಪಾಲಿಗೆ ಅದು ತುಸು ನೆಮ್ಮದಿ ನೀಡಿದಂತಾಗಿದೆ. 

ವಾರ್ ರೂಮ್ ನಿಂದ ಇಂಜೆಕ್ಷನ್ ಬಾಟಲ್ ಗಳಿರುವ ಕಾರ್ಟೂನ್ ಗಳನ್ನು ತಮ್ಮ ಕಾರಿನಲ್ಲಿ ಹೊತ್ತುಕೊಂಡು ಸಂಸದರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಬುಧವಾರ ಬೆಳಿಗ್ಗೆಯೇ ವಿಮಾನ ಹಿಡಿದು ಕಲಬುರಗಿಗೆ ಬೆಳಗಿನ 10 ಗಂಟೆಯೊಳಗೇ ಬಂದಿಳಿದು ನಿಲ್ದಾಣದಲ್ಲೇ ಸಹಾಯಕ ಔಷಧ ನಿಯಂತ್ರಕರಿಗೆ ಇಂಜೆಕ್ಷನ್ ವಯಲ್ ಗಳನ್ನು ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT