ರಾಜ್ಯ

ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಿಗೆ ಆರೋಗ್ಯ ಸೌಲಭ್ಯ ನೀಡಿ: ಸರ್ಕಾರಕ್ಕೆ ಸರ್ಕಾರಿ ಶಾಲಾ ಶಿಕ್ಷಕರ ಆಗ್ರಹ

Manjula VN

ಬೆಂಗಳೂರು: ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿರುವ ಶಿಕ್ಷಕರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಿ ಶಾಲೆಗಳ ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಕೊರತೆಗಳು ಎದುರಾಗುತ್ತಿವೆ. ಹೀಗಾಗಿ ಆತಂಕಕ್ಕೊಳಗಾಗಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿರುವ ಶಿಕ್ಷಕರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ. 

ಕೊರೋನಾ ಸೋಂಕಿತರ ಪತ್ತೆಗೆ ಶಿಕ್ಷಕರನ್ನು ಆರೋಗ್ಯ ಇಲಾಖೆಯ ಕಾರ್ಯಕರ್ತರೊಂದಿಗೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಈ ವೇಳೆ ಶಿಕ್ಷಕರು ಕೊರೋನಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ. ಸಂಘಟನೆ ವತಿಯಿಂದ ಶಿಕ್ಷಕರಿದೆ 1.68 ಲಕ್ಷ ಹಣವನ್ನು ನೀಡಲಾಗುತ್ತಿದೆ. ಪ್ರತೀನಿತ್ಯ 5-6 ಶಿಕ್ಷಕರಾದರೂ ನನಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಗರ್ಭಿಣಿಯರಿಗೆ, ವಯಸ್ಸಾದವರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಪದ್ಮಲತಾ ಜಿ ಬಿ ಅವರು ಹೇಳಿದ್ದಾರೆ. 

10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಶಿಕ್ಷಕರನ್ನೂ ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಇದು ಸರಿಯಲ್ಲ. ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್ ಗಳನ್ನು ನೀಡಲಾಗುತ್ತಿಲ್ಲ. 5 ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಜಿಲ್ಲಾ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು 10ನೇ ತರಗತಿಯ ಶಿಕ್ಷಕಿ ನಾಗಮ್ಮ (ಹೆಸರು ಬದಲಿಸಲಾಗಿದೆ) ಎಂಬುವವರು ಹೇಳಿದ್ದಾರೆ. 

ಇತರೆ ಸ್ಥಳಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಗಳು ಇಲ್ಲದ ಕಾರಣ, ಕಳೆದ ವರ್ಷದಂತೆಯೇ ಈ ಬಾರಿಯೂ ಕೂಡ ಶಿಕ್ಷಕರು ಇರುವ ಸ್ಧಳಗಳಲ್ಲೇ ಕೊರೋನಾ ಕರ್ತವ್ಯ ನಿಭಾಯಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಎಸ್‌ಪಿಎಸ್‌ಟಿಎ) ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿಯವರು ಹೇಳಿದ್ದಾರೆ. 

ಇದೇ ವೇಳೆ 55 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಸಣ್ಣ ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ. 

SCROLL FOR NEXT