ರಾಜ್ಯ

ಭ್ರಷ್ಟಾಚಾರ ಪ್ರಕರಣದಲ್ಲಿ ಬಿಎಸ್ ವೈ ಕುಟುಂಬಕ್ಕೆ ಸಂಕಷ್ಟ: ಯಡಿಯೂರಪ್ಪ, ವಿಜಯೇಂದ್ರಗೆ ಹೈಕೋರ್ಟ್ ನೋಟಿಸ್

Shilpa D

ಬೆಂಗಳೂರು: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಮಗ ಬಿವೈ ವಿಜಯೇಂದ್ರ ಸೇರಿದಂತೆ ಕರ್ನಾಟಕ ಹೈಕೋರ್ಟ್ ನಾಲ್ವರಿಗೆ ಮಂಗಳವಾರ ನೋಟಿಸ್ ನೀಡಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳ ಬಳಿಕ ಹೈಕೋರ್ಟ್‌ ಬಿ.ಎಸ್‌. ಯಡಿಯೂರಪ್ಪ, ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಸೇರಿದಂತೆ ಕುಟುಂಬದ ಕೆಲವು ಸದಸ್ಯರಿಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್‌ ಜಾರಿ ಮಾಡಿದೆ. ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ಐಎಎಸ್‌ ಅಧಿಕಾರಿಯೊಬ್ಬರಿಗೂ ನೋಟಿಸ್‌ ಹೋಗಿದೆ.

ಯಡಿಯೂರಪ್ಪ, ಅವರ ಮಗ ಬಿವೈ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಾಡಿ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಸಂಬಂಧಿ ಸಂಜಯ್ ಶ್ರೀ, ಸಚಿವ ಎಸ್‌ಟಿ ಸೋಮಶೇಖರ್, ಐಎಎಸ್ ಅಧಿಕಾರಿ ಜಿಸಿ ಪ್ರಕಾಶ್ ಅವರ ಹೆಸರನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

2020ರ ನವೆಂಬರ್ 20ರಂದು, ಯಡಿಯೂರಪ್ಪ ಅವರ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ನವೆಂಬರ್ 25ರಂದು ಎಸಿಬಿಗೆ ದೂರು ಸಲ್ಲಿಸಲಾಗಿತ್ತು. ಆದರೆ 2020ರ ಡಿಸೆಂಬರ್ 15ರಂದು ಈ ದೂರಿನ ತನಿಖೆಯನ್ನು ಎಸಿಬಿ ಅಂತ್ಯಗೊಳಿಸಿತ್ತು.

ಪ್ರಸಕ್ತ ವರ್ಷ ಜುಲೈ 8ರಂದು ವಿಶೇಷ ನ್ಯಾಯಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಏಕ ಸದಸ್ಯ ಪೀಠದ ನ್ಯಾ. ಎಸ್‌ ಸುನೀಲ್‌ ದತ್‌ ಯಾದವ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಅಂದಿನ ಸಿಎಂ ಯಡಿಯೂರಪ್ಪ ಮತ್ತು ಸಚಿವರಾಗಿದ್ದ ಸೋಮಶೇಖರ್‌ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಯಲ್ಲಿ ಗುತ್ತಿಗೆದಾರರಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಶೇಷ ನ್ಯಾಯಲಯ ರದ್ದುಪಡಿಸಿತ್ತು.
 

SCROLL FOR NEXT