ರಾಜ್ಯ

ಇಡಿ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ, ಮನಿ ಲಾಂಡರಿಂಗ್ ಸಂಬಂಧಪಟ್ಟಂತೆ ಕೇಳಿದರು: ರೋಷನ್ ಬೇಗ್ 

Sumana Upadhyaya

ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮನೆ ಬೆನ್ನಲ್ಲೇ, ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ತಡರಾತ್ರಿಯವರೆಗೆ ಮುಂದುವರಿದು ಇದೀಗ ಮುಕ್ತಾಯವಾಗಿದೆ. 

ಸತತ 20 ಗಂಟೆಗೂ ಅಧಿಕ ಕಾಲ ರೋಷನ್ ಬೇಗ್ ನಿವಾಸದಲ್ಲಿ ಮೇಲೆ ಇಡಿ ಅಧಿಕಾರಿಗಳು ಶೋಧ ಮುಂದುವರಿಸಿ ಅಕ್ರಮ ಹಣ ವರ್ಗಾವಣೆ, ಐಎಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಪ್ರಶ್ನೆ ಕೇಳಿದರು ಎಂದು ರೋಶನ್ ಬೇಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಮೂರ್ನಾಲ್ಕು ಗಂಟೆಗಳಲ್ಲಿ ವಿಚಾರಣೆ ಮುಗಿಯಬೇಕಾಗಿತ್ತು, ಅದೇಕೋ ಸಾಕಷ್ಟು ಹೊತ್ತು ವಿಚಾರಣೆ, ಶೋಧವನ್ನು ಅಧಿಕಾರಿಗಳು ಮುಂದುವರಿಸಿದರು. ಅವರು ಕೇಳಿದ್ದಕ್ಕೆಲ್ಲಾ ಸಂಪೂರ್ಣ ವಿವರ ನೀಡಿದ್ದೇನೆ, ಐಟಿ ಇಲಾಖೆಗೂ ನನ್ನ ಆಸ್ತಿ ವಿವರಗಳ ದಾಖಲೆಗಳನ್ನು ಕೊಟ್ಟಿದ್ದೇನೆ, ಏನೂ ಮುಚ್ಚುಮರೆಯಿಲ್ಲ, ಮನಿ ಲಾಂಡರಿಂಗ್ ಬಗ್ಗೆ ಕೇಳಿದರು, ನಾನು ಅದರಲ್ಲಿ ಭಾಗಿಯಾಗಿಲ್ಲ ಎಂದು ವಿವರಣೆ ಕೊಟ್ಟಿದ್ದೇನೆ, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ, ನಮ್ಮದು 300, 500 ಎಕರೆ ಜಾಗ ಎಲ್ಲೂ ಇಲ್ಲ, ಅಧಿಕಾರಿಗಳು ನೊಟೀಸ್ ಕೊಟ್ಟಿಲ್ಲ, ಮುಂದಿನ ಬಾರಿ ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದಿದ್ದಾರೆ. 

ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆಯ ಮೇಲೆ ದಾಳಿ ನಡೆಸಿದ ಸಮಯದಲ್ಲಿಯೇ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ನಡೆದಿದೆ. ಐಎಂಎ ಹಗರಣ, ಮನ್ಸೂರ್ ಖಾನ್ ಜೊತೆ ಅವ್ಯವಹಾರ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಶೋಧ ಮುಂದುವರಿಯಿತು. ರೋಷನ್ ಬೇಗ್‌ಗೆ ಸಂಬಂಧಿಸಿದ 6 ಕಡೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

SCROLL FOR NEXT