ರಾಜ್ಯ

'ಮಸಾಲೆ ದೋಸೆ, ಬೊಂಬಾಟ್ ಗುರು' 'ನಮಸ್ಕಾರ ಮುಖ್ಯಮಂತ್ರಿ ಅವರೇ' ಹೀಗೆಂದ ಬ್ರಿಟಿಷ್ ಹೈಕಮಿಷನರ್...

Sumana Upadhyaya

ಬೆಂಗಳೂರು: 'ನಮಸ್ಕಾರ ಮುಖ್ಯಮಂತ್ರಿ ಅವರೇ', ಮಸಾಲೆ ದೋಸೆ, ಬೊಂಬಾಟ್ ಗುರು, ಏಕ್ ದಮ್ ಮಸ್ತ್ ಹೀಗಂದಿದ್ದು ಭಾರತದ ಬ್ರಿಟಿಷ್ ಹೈಕಮಿಷನರ್. ಅರೆ...ಕನ್ನಡಕ್ಕೂ ಬ್ರಿಟಿಷ್ ಹೈಕಮಿಷನರ್ ಗೂ ಎತ್ತಣಿಂದೆತ್ತ ಸಂಬಂಧ ಎಂದು ಅಚ್ಚರಿಪಟ್ಟಿರಾ?

ಕರ್ನಾಟಕ ಭೇಟಿಗೆ ಆಗಮಿಸಿದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ನಿನ್ನೆ ಭೇಟಿ ಮಾಡಿದ್ದರು, ಅದಕ್ಕೂ ಮುನ್ನ ದಕ್ಷಿಣ ಭಾರತದ ಮಸಾಲೆ ದೋಸೆಯನ್ನು ಸವಿದು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ, ಅಲ್ಲದೆ ಕನ್ನಡ ಭಾಷೆಯಲ್ಲಿಯೇ ಅವರ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಇನ್ನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ ಹಾಕಿ ನಮಸ್ಕಾರ ಮುಖ್ಯಮಂತ್ರಿಯವರೇ ಎಂದು ಬರೆದುಕೊಂಡಿದ್ದಾರೆ, ಈ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.

ನಿನ್ನೆ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದ ಎಲ್ಲಿಸ್ ಅವರು ಟ್ವಿಟ್ಟರ್ ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಅವರ ಅಧಿಕಾರಿಗಳು ನಮ್ಮನ್ನು ಸ್ವಾಗತಿಸಿದ ರೀತಿ ಖುಷಿಯಾಗಿದೆ. ಶಿಕ್ಷಣ, ಸಂಶೋಧನೆ, ಹೂಡಿಕೆ, ಸ್ಥಿರತೆ, ಮೂಲಭೂತ ಸೌಕರ್ಯ ಮತ್ತು ಭಾರತ ಮತ್ತು ಇಂಗ್ಲೆಂಡಿನ ಪ್ರತಿಭಾವಂತರನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ ಮುಂದಿನ ದಿನಗಳಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿದ್ದಕ್ಕೆ ಬ್ರಿಟನ್ ರಾಯಭಾರಿಗೆ ನೆಟ್ಟಿಗರು ಮನಸೋತಿದ್ದಾರೆ. ಅಲೆಕ್ಸ್ ಅವರದ್ದು ನಿಜಕ್ಕೂ ಸೌಜನ್ಯದ ಗುರುತಿಸುವಿಕೆ.ನಮಸ್ಕಾರ ಅಲೆಕ್ಸ್ ಅವರೇ, ಭಾಷೆಯನ್ನು ಪ್ರೀತಿಸುವ ನಿಮ್ಮ ನಡೆ ಖುಷಿ ತಂದಿದೆ ಎಂದು ಹಲವು ಪ್ರತಿಕ್ರಿಯಿಸಿದ್ದಾರೆ.

ಇನ್ನು ದಕ್ಷಿಣ ಭಾರತದ ಪ್ರಖ್ಯಾತ ಮಸಾಲೆ ದೋಸೆ ಬಗ್ಗೆ ಕೂಡ ಅಲೆಕ್ಸ್ ಅವರು ಬರೆದುಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ನಾನು ನಾಳೆ ಹೇಗೆ ದೋಸೆ ತಿನ್ನಬೇಕು ಎಂದು ಜನರಲ್ಲಿ ಕೇಳಿದ್ದಾರೆ. ಅದಕ್ಕೆ ಶೇಕಡಾ 92ರಷ್ಟು ಮಂದಿ ಕೈಯಿಂದ ತಿನ್ನಿ ಎಂದಿದ್ದಾರೆ. ನಿನ್ನೆ ಅವರು ಮಸಾಲೆ ದೋಸೆ ತಿನ್ನುವ ವಿಡಿಯೊವನ್ನು ಶೇರ್ ಮಾಡಿ ಮಸಾಲೆ ದೋಸೆ ಬೊಂಬಾಟ್ ಗುರು, ಏಕ್ ದಮ್ ಮಸ್ತ್ ಎಂದು ಬರೆದುಕೊಂಡಿರುವುದು ನೆಟ್ಟಿಗರಿಗೆ ಭಾರೀ ಮಜ ಹಾಗೂ ಖುಷಿ ನೀಡಿದೆ.

ನಂತರ ಅವರು ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಕರ್ನಾಟಕ ಮತ್ತು ಇಂಗ್ಲೆಂಡ್ ನಡುವೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಸಂಯೋಜನೆಯಿಂದ ಕೆಲಸ ಮಾಡುವ ಬಗ್ಗೆ ಕೋರಿದರು.

SCROLL FOR NEXT