ರಾಜ್ಯ

ರಾಜ್ಯದಲ್ಲಿ ಆಗಸ್ಟ್ 23ರಿಂದ ಶಾಲಾ-ಕಾಲೇಜು ಆರಂಭಕ್ಕೆ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

Vishwanath S

ಬೆಂಗಳೂರು: ರಾಜ್ಯದಲ್ಲಿ ಆ 23ರಿಂದ 9, 10 ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ. 

ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ, ಕೋವಿಡ್ ನಿರ್ವಹಣೆ ಮತ್ತು ಶಾಲೆ ಕಾಲೇಜುಗಳನ್ನು ಪುನರಾರಂಭಿಸುವ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸಿದರು. 

ಸಭೆಯಲ್ಲಿ ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು  ಪ್ರಾರಂಭಿಸಲು ಹಾಗೂ ರಾಜ್ಯದ ಕೋವಿಡ್ ಸ್ಥಿತಿಗತಿಯನ್ನು ಆಧರಿಸಿ, ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ಪ್ರಾರಂಭಿಸುವ ಬಗ್ಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿ ನಡೆಸಲು ನಿರ್ಧರಿಸಿದ್ದು, ಶಾಲೆ ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಕೆ. ಸುಧಾಕರ್, ತಜ್ಞ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್, ಡಾ. ದೇವಿಪ್ರಸಾದ್ ಶೆಟ್ಟಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

SCROLL FOR NEXT