ಬೆಂಗಳೂರು: ನಿನ್ನೆಯಷ್ಟೇ ನಿವಾಸಗಳ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ದೆಹಲಿಗೆ ಬರುವಂತೆ ನೋಟಿಸ್ ನೀಡಿದ್ದು, ಪರಿಣಾಮ ಶಾಸಕ ಜಮೀರ್ ಅಹ್ಮದ್ ಖಾನ್ ದೆಹಲಿಗೆ ದೌಡಾಯಿಸಿದ್ದಾರೆ.
ಹೌದು.. ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದ್ದು, ಈ ಹಿನ್ನೆಲೆ ಅವರು ಇಂದು ಹೆಚ್‌ಎಎಲ್‌ನಿಂದ ದೆಹಲಿಗೆ ತೆರಳಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು 2 ದಿನಗಳ ಹಿಂದೆ ದಾಳಿ ನಡೆಸಿದ್ದರು. ಇದೀಗ ದೆಹಲಿಗೆ ಬುಲಾವ್ ಬಂದಿರುವ ಹಿನ್ನೆಲೆ ಶಾಸಕ ಜಮೀರ್ಗೆ ಸಂಕಷ್ಟ ಎದುರಾಗಿದೆ.
ಗಮನಾರ್ಹವೆಂದರೆ ನಿನ್ನೆ ಬೆಳಿಗ್ಗೆವರೆಗೂ ತಮ್ಮ ನಿವಾಸಗಳು, ಕಚೇರಿಗಳ ಮೇಲೆ ನಡೆದಿದ್ದ ಇ.ಡಿ ಅಧಿಕಾರಿಗಳ ದಾಳಿ ಬಳಿಕ ಇ.ಡಿ ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ. ಅವರಿಗೆ ಏನೂ ಸಿಕ್ಕಿಲ್ಲ. ನನಗೂ ನೆಮ್ಮದಿ ಸಿಕ್ಕಿದೆ ಎಂದು ಶಾಸಕ ಜಮೀರ್ ಹೇಳಿದ್ದರು. ಆದರೆ ಕ್ಷಿಪ್ರವಾಗಿ ದಾಖಲೆಗಳ ಪರಿಶೀಲನೆ ಮುಗಿಸಿರುವ ಇ.ಡಿ ಅಧಿಕಾರಿಗಳು ಮಾರನೆಯ ದಿನವೇ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ನೋಟಿಸ್ ತಕ್ಷಣ ದೆಹಲಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.