ರಾಜ್ಯ

ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಬದಲು ನಾಗರಹೊಳೆ ನ್ಯಾಷನಲ್ ಪಾರ್ಕ್ ಎಂದಿರಲಿ, ಇಲ್ಲವೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರನ್ನಿಡಿ: ಕೊಡಗು ಜನತೆಯ ಆಗ್ರಹ 

Sumana Upadhyaya

ಬೆಂಗಳೂರು: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡುತ್ತಿದ್ದಂತೆ ಕೊಡಗು ಜಿಲ್ಲೆಯ ಸ್ಥಳೀಯರು ನಾಗರಹೊಳೆ ಉನ್ಯಾನವನದ ಹೆಸರು ಕೂಡ ಬದಲಾಯಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಅಭಿಯಾನವೇ ಆರಂಭವಾಗಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪರಿಸರ ಹಾಗೂ ಅರಣ್ಯ ಖಾತೆ ಸಚಿವರಿಗೆ ಮನವಿ ಸಲ್ಲಿಸುತ್ತಿರುವ ಕೊಡಗು ಜಿಲ್ಲೆ ಜನತೆ ರಾಜೀವ್ ಗಾಂಧಿ ನಾಗರಹೊಳೆ ಉದ್ಯಾನವನವನ್ನು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅಥವಾ ಜನರಲ್ ಕೆ ಎಸ್ ತಿಮ್ಮಯ್ಯ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇಲ್ಲಿನ ಕಾಫಿ ಬೆಳೆಗಾರ ನವೀನ್ ಎಂ ಸಹಿ ಅಭಿಯಾನವನ್ನು ಆರಂಭಿಸಿದ್ದು, ರಾಜಕೀಯ ಪಕ್ಷವೊಂದರ ಅಥವಾ ಕುಟುಂಬವೊಂದನ್ನು ಓಲೈಸಲು ರಾಜೀವ್ ಗಾಂಧಿ ಉದ್ಯಾನವನ ಎಂದು ಹೆಸರಿಡಲಾಗಿದೆ. ಪ್ರಖ್ಯಾತ ವ್ಯಕ್ತಿಯೊಬ್ಬರ ಹೆಸರನ್ನಿಡಬೇಕೆಂದರೆ ನಮ್ಮ ಸ್ಥಳೀಯ ಗಣ್ಯರ, ಕೊಡಗಿನ ಹೆಸರನ್ನು ಇಡೀ ದೇಶ, ಜಗತ್ತಿಗೆ ಖ್ಯಾತಗೊಳಿಸಿ ದಂತಕಥೆಗಳ ಹೆಸರನ್ನಿಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಕೊಡಗು ಜಿಲ್ಲೆಯ ಜನತೆ ಕೂಡ ಬೆಂಬಲ ಸೂಚಿಸಿದ್ದಾರೆ. ಕೊಡಗು ವನ್ಯಜೀವಿ ಸೊಸೈಟಿಯ ನಿವೃತ್ತ ಕರ್ನಲ್ ಸಿ ಪಿ ಮುತ್ತಣ್ಣ, ನಾವು ಯಾವತ್ತೂ ಅದನ್ನು ರಾಜೀವ್ ಗಾಂಧಿ ಉದ್ಯಾನವನ ಎಂದು ಕರೆಯುವುದೇ ಇಲ್ಲ, ಪ್ರತಿಯೊಬ್ಬರೂ ಅದನ್ನು ನಾಗರಹೊಳೆ ಉದ್ಯಾನವನ ಎಂದು ಕರೆಯುತ್ತಾರೆ. ಒಂದು ದಿನ ನಾವು ಉದ್ಯಾನವನದ ಬೋರ್ಡ್ ನಲ್ಲಿ ಸರ್ಕಾರ ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದು ಕಂಡುಬಂತು ಎನ್ನುತ್ತಾರೆ.

ಉದ್ಯಾನವನಗಳ ಹೆಸರು ಬದಲಿಸುವ ಬಗ್ಗೆ ಗಮನ ಹರಿಸುವ ಬದಲು ಮಾನವ ಮತ್ತು ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸೋಣ ಎಂದು ಪರಿಸರ ಸಂರಕ್ಷಣಕಾರರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

SCROLL FOR NEXT