ರಾಜ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು, ಬಿಡುಗಡೆ ಅನುಮಾನ

Srinivasamurthy VN

ನವದೆಹಲಿ: ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೀಡಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕೂನೆಗೂ ಸುಪ್ರೀಂ ಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ನೀಡಿದೆ.

ವಿನಯ್ ಕುಲಕರ್ಣಿ ಪರ ವಕೀಲರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠ ಷರತ್ತುಬದ್ಧ ಜಾಮೀನು  ಮಂಜೂರು ಮಾಡಿದೆ. 

ಇನ್ನು ಈ ಜಾಮೀನು ಅರ್ಜಿಯ ವಿಚಾರಣೆ ವೇಳೆ ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತು. ವಿನಯ್ ಕುಲಕರ್ಣಿ ಇಡೀ ಪ್ರಕರಣದ ಪ್ರಮುಖ ಆರೋಪಿ, ಇವರು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು. ನಕಲಿ ಆರೋಪಿಗಳನ್ನು ಸೃಷ್ಟಿಸಿ ಭೂ ವೈಷಮ್ಯಕ್ಕಾಗಿ ಕೊಲೆ ನಡೆದಿದೆ ಎನ್ನುವಂತೆ ಬಿಂಬಿಸಲಾಗಿತ್ತು. ಕೊಲೆ ಆರೋಪಿಗಳಿಗೆ ವಿನಯ್ ಕುಲಕರ್ಣಿ ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ತನಿಖೆಯ ಹಂತದಲ್ಲಿ ಜಾಮೀನು ನೀಡಿದಲ್ಲಿ ವಿನಯ್ ಕುಲಕರ್ಣಿ ಸಾಕ್ಷ್ಯ ನಾಶ ಮಾಡಬಹುದು, ವಿಚಾರಣೆಗೆ ಸಹಕರಿಸದಿರಬಹದು ಎಂದು ಸಿಬಿಐ ಪರ ವಕೀಲ ಎಎಸ್‍ಜಿ ಎಸ್.ವಿ. ರಾಜು ವಾದ ಮಂಡಿಸಿದರು. ರಾಜ್ಯ ಸರ್ಕಾರದ ಪರವಾಗಿ ಎಎಸ್‍ಜಿ ವಾದ ಮಂಡಿಸಿದರು.

ಅದಾಗ್ಯೂ ವಿನಯ್ ಕುಲಕರ್ಣಿ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಅಂತೆಯೇ ಧಾರವಾಡಕ್ಕೆ ಬಾರದಿರುವಂತೆ ಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಗೆ ಅಧಿಕಾರಿಗಳು ಕರೆದಾಗ ಬರಬೇಕು ಮತ್ತು ಸಹಕರಿಸಬೇಕು ಎಂದು ಹೇಳಿದೆ.

ಜಾಮೀನು ಸಿಕ್ಕರೂ ವಿನಯ್ ಬಿಡುಗಡೆ ಅನುಮಾನ
ಮುಖ್ಯ ಪ್ರಕರಣದಲ್ಲಿ ಮಾತ್ರ ಇಂದು ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿದ್ದು, ವಿನಯ್ ಕುಲಕರ್ಣಿಯ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಈ ಕೇಸ್ ಇತ್ಯರ್ಥವಾಗುವವರೆಗೂ ಜೈಲಿನಿಂದ ಹೊರಬರುವುದು ಅನುಮಾನ ಎನ್ನಲಾಗಿದೆ.
 

SCROLL FOR NEXT