ರಾಜ್ಯ

ಮಂಗಳೂರಲ್ಲಿ ಎನ್ಐಎ ಕಚೇರಿ ಸ್ಥಾಪನೆ: ಸಿಎಂ ಬೊಮ್ಮಾಯಿ ಸುಳಿವು

Manjula VN

ಮಂಗಳೂರು: ರಾಷ್ಟ್ರೀಯ ತನಿಖಾ ದಳ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಸುಳಿವು ನೀಡಿದ್ದಾರೆ. 

ಎರಡು ದಿನಗಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬೇಟಿ ಮುಕ್ತಾಯಗೊಳಿಸಿದ ಬಳಿಕ ಶುಕ್ರವಾರ ವಿಮಾನ ನಿಲ್ದಾಣಕ್ಕೆ ತೆರಳು ಮುನ್ನ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ರಾಜ್ಯ ಸರ್ಕಾರ ಒಬ್ಬ ದಕ್ಷ ಗೃಹ ಸಚಿವರನ್ನು ಹೊಂದಿದೆ ಅಧಿಕಾರ ಸ್ವೀಕರಿಸಿದ ಬಳಿಕ ಎರಡು ಸಭೆಗಳನ್ನು ನಡೆಸಿ ವರದಿ ಪಡೆದುಕೊಂಡಿದ್ದಾರೆ. ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ರಾಜ್ಯ ಗೃಹ ಸಚಿವರು ಶೀಘ್ರವೇ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ. 

ಪರಿಶೀಲನೆ ಬಳಿಕ ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಎನ್ಐಎ ಕಚೇರಿ ಸ್ಥಾಪನೆ ದಿಕ್ಕಿನಲ್ಲಿ ಈಗಾಗಲೇ ಕೆಲವು ಹೆಜ್ಜೆಗಳನ್ನು ಇರಿಸಿದ್ದೇವೆ. ಆದರೆ, ಇದನ್ನು ಬಹಿರಂಗಪಡಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆಂದಿದ್ದಾರೆ. 

ಕಳೆದ ವಾರವಷ್ಟೇ ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾ ಅವರ ಮನೆಗೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಇಸಿಸ್ ಜೊತೆಗಿನ ನಂಟಿನ ಆರೋಪದ ಹಿನ್ನೆಲೆಯಲ್ಲಿ ಬಾಷಾ ಅವರ ಪುತ್ರನನ್ನು ಬಂಧಿಸಿದ್ದರು. ಈ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

SCROLL FOR NEXT