ರಾಜ್ಯ

ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ: 3 ಆರೋಪಿಗಳಿಗೆ ನ್ಯಾಯಾಂಗ ಬಂಧನ; ಘಟನೆಗೆ ರೌಡಿ ಶೀಟರ್ ಕುಮ್ಮಕ್ಕು?

Shilpa D

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾಗರ್ , ನವೀನ್ ಮತ್ತು ಶ್ರೀಧರ್ ಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಪ್ರಕರಣದ ಹಿಂದೆ ರೌಡಿ ಶೀಟರ್ ಒಬ್ಬನ ಕೈವಾಡವಿದ್ದು, ಪೊಲೀಸರು ಈ ಸಂಬಂಧ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.

ಕಾರುಗಳಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.  ಆರೋಪಿಗಳು ಕೆಲ ದಿನಗಳಿಂದ ರೌಡಿ ಶೀಟರ್ ಒಬ್ಬನ ಸಂಪರ್ಕದಲ್ಲಿರುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಆತನನ್ನು ವಶಕ್ಕೆ ಪಡೆದುಕೊಳ್ಳಲು ಸೂಕ್ತಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ರಾಜಕೀಯ ದ್ವೇಷ ಅಥವಾ ರಾಜಕೀಯ ವ್ಯಕ್ತಿಗಳ ಕೈವಾಡವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಮದ್ಯವ್ಯಸನಿಗಳು ಮತ್ತು ಅವರಲ್ಲಿ ಒಬ್ಬರು ಡ್ರಗ್ ಅಡಿಕ್ಟ್, ಇದೊಂದು ಪೂರ್ವಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಇರುವ ಜನರು, ಆರೋಪಿಗಳ ಮೂಲಕ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಆರೋಪಿಗಳು ಹೇಳುತ್ತಿರುವುದನ್ನು ನಂಬಲು ಸಾಧ್ಯವಿಲ್ಲ, ಪೊಲೀಸರು ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.

ಗುರುವಾರ ಆರೋಪಿಗಳು ಸತೀಶ್ ರೆಡ್ಡಿ ಅವರ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಎರಡು ಬಾರಿ ಹೋಗಿದ್ದಾಗಲೂ ಶಾಸಕನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ, ಹಾಗೂ ಬಡವರಿಗೆ ಸತೀಶ್ ರೆಡ್ಡಿ ಸಹಾಯ ಮಾಡುತ್ತಿರಲಿಲ್ಲ ಹೀಗಾಗಿ ಅಸಮಾಧಾನದಿಂದ ಬೆಂಕಿ ಹಚ್ಚಿದ್ದಾಗಿ ಒಬ್ಬ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
 

SCROLL FOR NEXT