ರಾಜ್ಯ

ಸದ್ಯ ಲಾಕ್‌ಡೌನ್‌ ಜಾರಿಗೊಳಿಸುವ ಪರಿಸ್ಥಿತಿ ಇಲ್ಲ: ಆರ್ ಅಶೋಕ್‌ ಸ್ಪಷ್ಟನೆ

Lingaraj Badiger

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತದೆ ಎಂಬ ಭಯ ಬೇಡ. ಸದ್ಯ ನಗರದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಕೋವಿಡ್‌ ಪ್ರಕರಣಗಳ ಆಧಾರದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಅವರು ಸೋಮವಾರ ಸ್ಪಷ್ಟಪಡಿಸಿದರು.

ಇಂದು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ 50 ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ 300 ರಿಂದ 400 ನಡುವೆ ಇದೆ. ಇದು ಸಹಜ ಮಟ್ಟ. ಈ ಸಂಖ್ಯೆ ಏನಾದರೂ ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳುವತ್ತ ಸರ್ಕಾರ ಮುಂದಿನ ಹೆಜ್ಜೆ ಇಡುವುದು ಶೇ. 100ರಷ್ಟು ನಿಶ್ಚಿತ ಎಂದರು.

ನಗರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮಾತ್ರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸುವ ಕುರಿತು ಹಾಗೂ ರಾತ್ರಿ ಕರ್ಫ್ಯೂವನ್ನು ಇನ್ನಷ್ಟು ಬಿಗುಗೊಳಿಸುವ ಬಗ್ಗೆ ಯೋಚನೆ ಮಾಡುತ್ತೇವೆ. ಕೋವಿಡ್‌ ಹರಡುವುದನ್ನು ತಡೆಯಲು ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು. 
ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಶ್ರಾವಣ ಶನಿವಾರ ಸೇರಿದಂತೆ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರ ಹಬ್ಬಗಳೂ ಈ ತಿಂಗಳಿನಲ್ಲಿ ಬರುತ್ತಿವೆ. ಆ ದೃಷ್ಟಿಯಿಂದ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮೂರು–ನಾಲ್ಕು ದಿನಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ. ಜನರ ಆರೋಗ್ಯ ನಮಗೆ ಮುಖ್ಯ. ಈ ದೃಷ್ಟಿಯಿಂದ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದರು.

SCROLL FOR NEXT