ರಾಜ್ಯ

ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

Shilpa D

ಬೆಂಗಳೂರು: ನ್ಯಾಯಾಲಯದ ತಡೆಯಾಜ್ಞೆ ನಡುವೆಯೂ ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಅನಾವರಣ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಮೇಲ್ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್‌, ಆಗ್ನೇಯ ವಿಭಾಗದ ಡಿಸಿಪಿಗೆ ಬುಧವಾರ ನಿರ್ದೇಶನ ನೀಡಿತು.

ಕೆರೆಗಳ ಒತ್ತುವರಿ ತೆರವು ಕುರಿತು ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಿಜೆ ಎ.ಎಸ್‌. ಓಕ್‌ ಮತ್ತು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು. ಆಗ ನ್ಯಾಯಪೀಠ, ಹಿಂದಿನ ಆದೇಶದಂತೆ ನಗರ ಪೊಲೀಸ್‌ ಆಯುಕ್ತರು ವರದಿ ಸಲ್ಲಿಸಿದ್ದಾರೆಯೇ ಎಂದು ಪ್ರಶ್ನಿಸಿತು. ಸರಕಾರಿ ವಕೀಲ ವಿಜಯಕುಮಾರ್‌ ಪಾಟೀಲ್‌ ಉತ್ತರಿಸಿ, ಹೌದು ಆಯುಕ್ತರು ವರದಿ ಸಲ್ಲಿಸಿದ್ದಾರೆ. ಘಟನೆ ಸಂಬಂಧ ಆ.16ರಂದು ಎಫ್‌ ಐಆರ್‌ ದಾಖಲಿಸಲಾಗಿದೆ, ತನಿಖೆ ಪ್ರಗತಿಯಲ್ಲಿದೆ ಎಂದರು.

ಆಗ ನ್ಯಾಯಪೀಠ, ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸಮಯಬೇಕಾಗುತ್ತದೆ ಎಂದು ಹೇಳಿತು. ಅಲ್ಲದೆ, ಈಶಾನ್ಯ ವಲಯ ಕೋರಮಂಗಲದ ಡಿಸಿಪಿ ತನಿಖೆಯ ಮೇಲ್ವಿಚಾರಣೆ ನಡೆಸಿ, ಆ.31ರವರೆಗೆ ನಡೆದಿರುವ ತನಿಖೆ ವಿವರಗಳನ್ನು ವರದಿ ರೂಪದಲ್ಲಿ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಸೆ. 2ಕ್ಕೆ ಮುಂದೂಡಿತು.

ಅದಕ್ಕೆ ಅರ್ಜಿದಾರರೊಬ್ಬರ ವಕೀಲರು, ಕಳೆದ ವಾರ ಆ.11 ರಂದು ಬೆಳಿಗ್ಗೆ ಬಿಬಿಎಂಪಿ ಅನಾವರಣಗೊಂಡಿದ್ದ ಪ್ರತಿಮೆಗೆ ಮತ್ತೆ ಹೊದಿಕೆ ಹಾಕಿತ್ತು. ಆದರೆ ಅಂದು ಸಂಜೆಯೇ ಮತ್ತೆ ಕೆಲವು ಸಂಘಟನೆಗಳವರು ಪ್ರತಿಮೆ ಅನಾವರಣ ಮಾಡಿದ್ದಾರೆ, ಅದಕ್ಕೆ ಹೊದಿಸಿದ್ದ ಹೊದಿಕೆ ತೆರೆದಿದ್ದಾರೆ ಎಂದರು.

SCROLL FOR NEXT