ರಾಜ್ಯ

ಹಾಸನ: ನಗರ ಸಭೆ ಕೌನ್ಸಿಲ್ ನಲ್ಲಿ ದೇವೇಗೌಡರ ಭಾವಚಿತ್ರ ತೆರವು; ಬಿಜೆಪಿ-ಜೆಡಿಎಸ್ ಕೌನ್ಸಿಲರ್ ಗಳ ನಡುವೆ ವಾಗ್ವಾದ!

Srinivas Rao BV

ಹಾಸನ: ಹಾಸನ ನಗರ ಸಭೆ ಕೌನ್ಸಿಲ್ ನ ಅಧ್ಯಕ್ಷರ ಚೇಂಬರ್ ನಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಭಾವಚಿತ್ರ ತೆರವುಗೊಂಡಿದ್ದು ಬಿಜೆಪಿ-ಜೆಡಿಎಸ್ ಕೌನ್ಸಿಲರ್ ಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಆ.19 ರಂದು ನಡೆದ ಸಿಎಂಸಿಯ ಸಾಮಾನ್ಯ ಸಭೆ ಇದೇ ಕಾರಣಕ್ಕಾಗಿ ರಣಾಂಗಣವಾಗಿತ್ತು. ಸತತ 40 ನಿಮಿಷಗಳ ಕಾಲ ಕೌನ್ಸಿಲರ್ ಗಳು ಪರಸ್ಪರ ವಾಗ್ದಾಳಿ ನಡೆಸಿದರು. ಪರಿಣಾಮ ಸಿಎಂಸಿ ಅಧ್ಯಕ್ಷ, ಬಿಜೆಪಿಯ ಆರ್ ಮೋಹನ್ ಎರಡು ಬಾರಿ ಸಭೆಯನ್ನು ಮುಂದೂಡಿದರು.

ವಿಷಯವನ್ನು ಪ್ರಸ್ತಾಪಿಸಿದ ಜೆಡಿಎಸ್ ನಸಯೀದ್ ಅಕ್ಬರ್, ಸಿಆರ್ ಶಂಕರ್, ಮಾಜಿ ಸಿಎಂಸಿಯ ಅಧ್ಯಕ್ಷರು ಹಾಗೂ ಪಕ್ಷದ ಸದಸ್ಯ ಗಿರೀಶ್, ದಶಕಗಳ ಕಾಲ ಅಧ್ಯಕ್ಷರ ಚೇಂಬರ್ ನಲ್ಲಿದ್ದ ಹೆಚ್ ಡಿ ದೇವೇ ಗೌಡ ಅವರ ಫೋಟೋವನ್ನು ಈಗಿನ ಅಧ್ಯಕ್ಷರು ಉದ್ದೇಶಪೂರ್ವಕವಾಗಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋ ಇನ್ನೂ ಅಲ್ಲಿಯೇ ಇದೆ. ಆದರೆ ದೇವೇಗೌಡರ ಫೋಟೋ ಇಲ್ಲ. ಸಿಎಂಸಿ ಅಧ್ಯಕ್ಷರು ಈ ರೀತಿ ಮಾಡುವ ಮೂಲಕ ದೇವೇಗೌಡರಿಗೆ ಅವಮಾನ ಮಾಡಿದ್ದಾರೆ ಎಂದು ಜೆಡಿಎಸ್ ನ ಕೆಲವು ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ನಂತರ ಅಧ್ಯಕ್ಷರು ದೇವೇಗೌಡರ ಭಾವಚಿತ್ರವನ್ನು ವಾಪಸ್ ಅದು ಇದ್ದ ಜಾಗದಲ್ಲೇ ಸ್ಥಾಪಿಸಿದ ಬಳಿಕ ಸಭೆ ಶಾಂತವಾಯಿತು.

ಹಾಸನ ನಗರಸಭೆಯಲ್ಲಿ ಫೋಟೋಗಳಿಗಾಗಿ ಹಣಾಹಣಿಯಾಗಿರುವುದು ಇದೇ ಮೊದಲೇನೂ ಅಲ್ಲ. ಮಾಜಿ ಕಂದಾಯ ಸಚಿವ ಹಾಗೂ ಹಿರಿಯ ಕಾಂಗ್ರೆಸ್ಸಿಗ ದಿ.ಹೆಚ್ ಸಿ ಶ್ರೀಕಂಠಯ್ಯ ಅವರ ಫೋಟೊವನ್ನು ಸಿಎಂ ಸಿ ಹಾಲ್ ನಲ್ಲಿ ಹಾಕುವ ವಿಚಾರವಾಗಿಯೂ ದಶಕಗಳ ಹಿಂದೆ ಇದೇ ಮಾದರಿಯ ಜಗಳ ಉಂಟಾಗಿತ್ತು.

ಇತ್ತೀಚಿನ ಘಟನೆಯ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಮೋಹನ್, "ಗೋಡೆಗಳಿಗೆ ಬಣ್ಣ ಹಾಕುವಾಗ ನೌಕರರು ಮಾಜಿ ಪ್ರಧಾನಿಗಳ ಫೋಟೋವನ್ನು ತೆಗೆದಿದ್ದರು. ನವೀಕರಣ ಕಾಮಗಾರಿ ಮುಕ್ತಾಯಗೊಂಡ ಬಳಿಕ ಅದನ್ನು ವಾಪಸ್ ಅಲ್ಲಿಯೇ ಹಾಕಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ. 

"ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ" ಎಂದು ಮೋಹನ್ ಹೇಳಿದ್ದಾರೆ. 

ಆದರೆ ಜೆಡಿಎಸ್ ಸದಸ್ಯರು ಮಾತ್ರ ಇದನ್ನು ಇಲ್ಲಿಗೇ ಬಿಡಲು ತಯಾರಿಲ್ಲ. "ಹೆಚ್ ಡಿ ರೇವಣ್ಣ ಅವರ ರಾಜಕೀಯ ಪ್ರತಿಸ್ಪರ್ಧಿ, ಶಾಸಕ ಪ್ರೀತಂ ಜೆ ಗೌಡ ಅವರ ಆಣತಿಯ ಮೇರೆಗೆ ಸಿಎಂಸಿ ಅಧ್ಯಕ್ಷರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT