ರಾಜ್ಯ

ಬನ್ನಿ, ಇಲ್ಲಿನ ಅವ್ಯವಸ್ಥೆಗಳ ನೀವೇ ನೋಡಿ: ಸಿಎಂ ಬೊಮ್ಮಯಿಗೆ ವ್ಯಾಪಾರಸ್ಥರ ಆಗ್ರಹ

Manjula VN

ಬೆಂಗಳೂರು: ಅವೆನ್ಯೂ ರಸ್ತೆ, ಚಿಕ್ಕಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಮಗಾರಿ ವಿಳಂಬ ಹಾಗೂ ನಿರಂತರ ಅಗೆಯುವಿಕೆಯಿಂದ ಬೇಸತ್ತು ಹೋಗಿರುವ ಅಲ್ಲಿನ ವ್ಯಾಪಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಅವ್ಯವಸ್ಥೆಗಳನ್ನು ನೋಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಕಮರ್ಷಿಯಲ್ ಸ್ಟ್ರೀಟ್ ಹಾಗೂ ಇತರೆ ರಸ್ತೆಗಳ ಕಾಮಗಾರಿ ಕೆಲಸಗಳನ್ನು ಪರಿಶೀಲನೆ ನಡೆಸಿದ್ದರು. ಅದೇ ರೀತಿಯ ಬೊಮ್ಮಾಯಿಯವರೂ ಕೂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಂಕ್ರಾಮಿಕ ರೋಗ ಈಗಾಗಲೇ ವ್ಯವಹಾರ ಚಟುವಟಿಕೆಗಳ ಮೇಲೆ ಶೇ.50ರಷ್ಟು ಪರಿಣಾಮ ಬೀರಿದೆ. ಇದೀಗ ನಾಗರೀಕ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮತ್ತಷ್ಟು ಸಂಕಷ್ಟಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ. 

ವಿಧಾನಸೌಧಕ್ಕೆ ಕೆಲವೇ ಕಿಲೋ ಮೀಟರ್ ಗಳ ಹಿಂದೆ ಅವೆನ್ಯೂ ರಸ್ತೆ ಇದೆ. ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಎರಡು ಬಾರಿ ನಗರ ಸಂಚಾರ ನಡೆಸಿದ್ದರು. ಆ ಎರಡೂ ಸಂಚಾರದ ಪಟ್ಟಿಯಲ್ಲಿ ಈ ರಸ್ತೆಯ ಪರಿಶೀಲನೆ ಸೇರ್ಪಡೆಗೊಳಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

2-3 ವರ್ಷಗಳಿಂದಲೂ ಅವೆನ್ಯೂ ರಸ್ತೆಗಳನ್ನು ತೋಡುತ್ತಲೇ ಇದ್ದಾರೆ. ಮೊದಲು ಬೆಸ್ಕಾಂ. ನಂತರ ಬಿಡಬ್ಲ್ಯೂಎಸ್ಎಸ್'ಬಿ ನಂತರ ಇತರೆ ಸಂಸ್ಥೆಗಳು...ಹೀಗೆ ಒಂದಾದ ಮೇಲೆ ಒಂದು ಸಂಸ್ಥೆಗಳು ರಸ್ತೆಗಳನ್ನು ತೋಡುತ್ತಲೇ ಇವೆ. ಇದೀಗ ಸ್ಮಾರ್ಟ್ ಸಿಟಿ ಜೊತೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಕಾಮಗಾರಿ ಕೆಲಸಗಳ ಪೂರ್ಣಗೊಳಿಸಲು ಸರ್ಕಾರ ಗಡುವನ್ನೇನೋ ನೀಡಿದೆ. ಆದರೆ. ಆ ಗಡುವಿನಲ್ಲೇ ಕಾಮಗಾರಿ ಕೆಲಸ ಮುಗಿಯುತ್ತದೆಯೋ, ಇಲ್ಲವೋ ಗೊತ್ತಿಲ್ಲ ಎಂದು ಅವೆನ್ಯೂ ರಸ್ತೆಯ ವ್ಯಾಪಾರಸ್ಥ ಸುಭಾಷ್ ಎಲ್ ಎಂಬವವರು ಹೇಳಿದ್ದಾರೆ. 

ಅವೆನ್ಯೂ ರಸ್ತೆ ಮತ್ತು ಚಿಕ್ಕಪೇಟೆ ವ್ಯಾಪಾರಸ್ಥರ ಪ್ರತಿನಿಧಿ ಸಜ್ಜನ್ ರಾಜ್ ಮೆಹ್ತಾ ಅವರು ಮಾತನಾಡಿ, ಅವೆನ್ಯೂ ರಸ್ತೆ ಉತ್ತರ ಮತ್ತು ದಕ್ಷಿಣ ಬೆಂಗಳೂರನ್ನು ಸಂಪರ್ಕಿಸುವ ಒಂದು ಪ್ರಮುಖ ರಸ್ತೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇತರ ವಾಣಿಜ್ಯ ವ್ಯಾಪಾರ ಮಾರ್ಗಗಳನ್ನು ಇದು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ,

ಈ ನಡುವೆ ಸಂಸದ ಪಿಸಿ ಮೋಹನ್ ಅವರು, ಸಮಯಕ್ಕೆ ಸರಿಯಾಗಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. 

SCROLL FOR NEXT