ರಾಜ್ಯ

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: ಕಾರ್ಯಕ್ರಮ ಪುನರಾರಂಭಕ್ಕೆ ಸರ್ಕಾರ ಚಿಂತನೆ

Manjula VN

ಬೆಂಗಳೂರು: ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

2021ರ ಫೆಬ್ರವರಿ ತಿಂಗಳಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದರು. ಕಾರ್ಯಕ್ರಮದಂತೆ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ನಿಂತು ಬಗೆಹರಿಸಬೇಕೆಂದು ಸೂಚಿಸಲಾಗಿತ್ತು. 

ಕಾರ್ಯಕ್ರಮದಂತೆ ಫೆಬ್ರವರಿ ತಿಂಗಳಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಉಳಿದುಕೊಂಡ ಸಚಿವ ಅಶೋಕ್ ಅವರು ಈ ವೇಳೆ 227 ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಂಕಷ್ಟಗಳನ್ನು ಆಲಿಸಿದ್ದರು. ಬಳಿಕ ಸಮಸ್ಯೆಗಳನ್ನು ಬಗೆಹರಿಸಿದ್ದರು. 

ಮಾರ್ಚ್ ತಿಂಗಳಿನಲ್ಲಿ ಹುಬ್ಬಳ್ಳಿಯ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದರು. ಈ ಕಾರ್ಯಕ್ರಮ ಸಾಕಷ್ಟು ಮೆಚ್ಚುಗೆಗಳೂ ವ್ಯಕ್ತವಾಗಿದ್ದವು. ಬಳಿಕ ಸಾಕಷ್ಟು ಶಾಸಕರೂ ಕಾರ್ಯಕ್ರಮದೊಂದಿಗೆ ಕೈಜೋಡಿಸಲು ಆರಂಭಿಸಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಲಾಕ್ಡೌನ್ ನಿಂದಾಗಿ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವಂತೆ ಆಗಿತ್ತು. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಶೋಕ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತಲೂ ಕಡಿಮೆ ಇರುವ  ಜಿಲ್ಲೆಗಳಲ್ಲಿ ಭೌತಿಕ ತರಗತಿಗಳ ಆರಂಭ ಮಾಡಿದ್ದಾರೆ. ಹೀಗಾಗಿ ಕಾರ್ಯಕ್ರಮವನ್ನು ಕೂಡ ಪುನರಾರಂಭ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT