ರಾಜ್ಯ

4 ಕೋಟಿ ರು ವಂಚಿಸಿ 60 ವರ್ಷದ ಪತ್ನಿ ಪರಾರಿ: ಬಸವನಗುಡಿ ಠಾಣೆಯಲ್ಲಿ ಪತಿ ದೂರು!

Shilpa D

ಬೆಂಗಳೂರು: ಪತ್ನಿ 4 ಕೋಟಿ ರು ವಂಚಿಸಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ 65 ವರ್ಷದ ಉದ್ಯಮಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿವಿಜಿ ರಸ್ತೆಯ ನಿವಾಸಿ ಉದ್ಯಮಿಯಾಗಿದ್ದು, ಪುಣೆ ಮೂಲದ ಮಹಿಳೆಯನ್ನು 1984ರಲ್ಲಿ ವಿವಾಹವಾಗಿದ್ದರು. ಕಳೆದ 4 ವರ್ಷದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 60 ವರ್ಷದ ಮಹಿಳೆ ಉದ್ಯಮಿ ವಿರುದ್ಧ ನಾಲ್ಕು ಕೇಸ್ ದಾಖಲಿಸಿದ್ದಳಂತೆ. 

ಮಹಾರಾಷ್ಟ್ರ ನ್ಯಾಯಾಲಯ ಮತ್ತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶಕ್ಕೆ ಸಂಬಂಧಿಸಿದ ಎರಡು ಕೇಸ್ ಮತ್ತು ಇತರ ಎರಡು ಸಿವಿಲ್ ಪ್ರಕರಣಗಳನ್ನು ನಗರ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ವಿಚ್ಛೇಧನ ಪಡೆಯುವ ಹಿನ್ನೆಲೆಯಲ್ಲಿ ದಂಪತಿ ಪರಸ್ಪರ ಚರ್ಚಿಸಿದ್ದರು, 4 ಕೋಟಿ ರೂಪಾಯಿಗಳನ್ನು ಪಾವತಿಸಿದರೆ ನಾಲ್ಕು ಪ್ರಕರಣಗಳನ್ನು ಹಿಂಪಡೆಯುವುದಾಗಿ ಮಹಿಳೆ ಒಪ್ಪಿಕೊಂಡರು.  ಅದನ್ನು ಆಕೆ ನ್ಯಾಯಾಲಯಕ್ಕೆ ಲಿಖಿತವಾಗಿ ನೀಡಿದ್ದಳು. ಅದರಂತೆ, ಆತ ತಲಾ 2 ಕೋಟಿ ರೂ.ಗಳ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಆಕೆಗೆ ಹಸ್ತಾಂತರಿಸಿದ್ದರು.

ಆದರೆ, ಆಕೆ ಆಗಸ್ಟ್ 18 ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ. ಆಗಸ್ಟ್ 19 ರಂದು ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿತು,  ಆದರೂ ಆಕೆ ಮತ್ತೆ ಗೈರಾಗಿದ್ದರು.  ಹೀಗಾಗಿ ಆಕೆಯ ಪತಿ ಶನಿವಾರ ನಮಗೆ ದೂರು ನೀಡಿದರು. ಮಹಿಳೆ ವಿರುದ್ಧ ವಂಚನೆ, ನ್ಯಾಯಾಂಗ ನಿಯಮ ಉಲ್ಲಂಘನೆ ಹಾಗೂ ಇತರ ಆರೋಪಗಳಿಗಾಗಿ ನಾವು ಕೇಸ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಬಸವನಗುಡಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT