ರಾಜ್ಯ

ನಂದಿ ಬೆಟ್ಟದಲ್ಲಿ ಕಸ ಎಸೆದಿದ್ದ ಕೆಎಸ್‌ಟಿಡಿಸಿ ಸಿಬ್ಬಂದಿ; ವಿಡಿಯೋ ವೈರಲ್; ಕಡೆಗೆ ಅವರಿಂದಲೇ ಸ್ವಚ್ಛತೆ

Lingaraj Badiger

ಬೆಂಗಳೂರು: ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಸ್ವಯಂಸೇವಕ ಸಂಘದ ಸದಸ್ಯರು ಕೆಎಸ್‌ಟಿಡಿಸಿ ಹೋಟೆಲ್ ಸಿಬ್ಬಂದಿಯೊಬ್ಬರು ನಂದಿ ಬೆಟ್ಟದ ಬಂಡೆಯ ಮೇಲೆ ಕಸ ಎಸೆಯುತ್ತಿರುವುದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಬಳಿಕ ಈ ವಿಡಿಯೋ ವೈರಲ್ ಆಗಿತ್ತು.

ಕೆಎಸ್‌ಟಿಡಿಸಿ ಹೋಟೆಲ್ ಸಿಬ್ಬಂದಿ ಕಸದ ಚೀಲಗಳನ್ನು ಖಾಲಿ ಮಾಡುವುದು ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಎಸೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಈ ಘಟನೆಯನ್ನು ತಕ್ಷಣವೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(KSTDC) ಗಮನಕ್ಕೆ ತರಲಾಯಿತು. "ಈ ಬಗ್ಗೆ ತನಿಖೆ ಮಾಡಲಾಗಿದ್ದು, ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಇಬ್ಬರು ಸಿಬ್ಬಂದಿ ಹೋಟೆಲ್ ನಿಯಮಗಳ ಬಗ್ಗೆ ಮಾಹಿತಿ ಇಲ್ಲದೆ ಈ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಸ ಹಾಕದಂತೆ ನೋಡಿಕೊಳ್ಳಲು ಹೋಟೆಲ್ ಆಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ "ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ ಅವರು, “ಇಬ್ಬರು ಸಿಬ್ಬಂದಿ ಹೊಸಬರು ಮತ್ತು ನಮ್ಮ ನಿಯಮಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಇದು ಒಂದು ಸಲ ನಡೆದ ಘಟನೆ. ಅವರನ್ನು ತರಾಟೆಗೆ ತೆಗೆದುಕೊಂಡು ಕಸವನ್ನು ಅಲ್ಲಿಂದ ತೆರವುಗೊಳಿಸುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನಂದಿ ಬೆಟ್ಟವು ದುರ್ಬಲ ಪರಿಸರ ವ್ಯವಸ್ಥೆಯನ್ನು ಹೊಂದಿದೆ. "ಪ್ರವಾಸಿಗರು ಸ್ಥಳದಲ್ಲಿ ಕಸ ಹಾಕುವುದರಿಂದ ನಾವು ಈಗಾಗಲೇ ಬೇಸತ್ತಿದ್ದೇವೆ. ಸ್ವಯಂಸೇವಕ ಸಂಘಗಳು ನಿಯಮಿತವಾಗಿ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಸವನ್ನು ತೆರವುಗೊಳಿಸುತ್ತವೆ, ಆದರೆ ಮತ್ತೆ ಅದೇ ಅವ್ಯವಸ್ಥೆ ”ಎಂದು ಸ್ಥಳೀಯರು ಹೇಳಿದ್ದಾರೆ.

SCROLL FOR NEXT