ರಾಜ್ಯ

ಓಮಿಕ್ರಾನ್ ಆತಂಕ ಮಧ್ಯೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ: ಆರೋಗ್ಯ ಸಚಿವ ಡಾ. ಸುಧಾಕರ್ ಪರಿಶೀಲನೆ

Sumana Upadhyaya

ಬೆಂಗಳೂರು: ಓಮಿಕ್ರಾನ್ ಕೋವಿಡ್ ರೂಪಾಂತರಿ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವುದರಿಂದ ವಿದೇಶಗಳಿಂದ ಬರುವ ನಾಗರಿಕರ ಮೇಲೆ ನಿಗಾ ವಹಿಸುತ್ತಿರುವ ಕುರಿತು ಇಂದು ಬುಧವಾರ ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪಶೀಲಿಸಿದರು.

ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಕಡ್ಡಾಯ: ಏರ್ ಪೋರ್ಟ್ ನಲ್ಲಿ ಪ್ರಯಾಣಿಕರನ್ನು ಹೇಗೆ ತಪಾಸಣೆ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಹೈರಿಸ್ಕ್ ದೇಶಗಳಿಂದ ಬಂದವರಿಗೆ ಏರ್​ಪೋರ್ಟ್​ಗಳಲ್ಲಿ ಕಡ್ಡಾಯವಾಗಿ ಟೆಸ್ಟಿಂಗ್, ಮಾಡಲಾಗುತ್ತದೆ ಎಂದರು. 

ಟೆಸ್ಟಿಂಗ್ ನಂತರ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತದೆ. ನೆಗೆಟಿವ್ ಬಂದರೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಬಂದ ಎಲ್ಲಾ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ಇರಿಸುತ್ತಿದ್ದು, ಏರ್​ಪೋರ್ಟ್​ಗಳಲ್ಲಿ ವಿಳಾಸ, ಪೋನ್ ನಂಬರ್ ಪಡೆದುಕೊಂಡು ಕಳಿಸಲಾಗುತ್ತದೆ ಎಂದರು. 

ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ನೀಡಬೇಕು. ನವೀಕರಿಸಿದ ಮಾರ್ಗಸೂಚಿಗಳಲ್ಲಿ ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು (ಕೊವಿಡ್ ಲಸಿಕೆ ಪಡೆದಿದ್ದರೂ) ಆಗಮನದ ನಂತರ ಕಡ್ಡಾಯವಾಗಿ ಕೊವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಹೊರಡುವ 72 ಗಂಟೆಗಳ ಮೊದಲು ಕೊವಿಡ್-19 ಪರೀಕ್ಷೆ ಮಾಡಿಸಬೇಕು ಎಂದರು. 

ವಿದೇಶಗಳಿಂದ ಬರುವವರಿಗೆ ಸೀಲ್ ಹಾಕುವ ವಿಚಾರ ಕುರಿತು ಸದ್ಯ ನಿರ್ಧಾರ ಕೈಗೊಂಡಿಲ್ಲ, ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಕೇಂದ್ರ ಸರ್ಕಾರ ಜೊತೆ ಚರ್ಚಿಸುತ್ತಿದ್ದೇವೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಮಾರ್ಗಸೂಚಿಗಳಿಗೆ ಜಿಲ್ಲೆಗಳ ಡಿಎಚ್ ಒಗಳ ಜೊತೆ ಕೂಡ ಚರ್ಚಿಸುತ್ತಿದ್ದೇನೆ ಎಂದರು.

SCROLL FOR NEXT