ಓಮಿಕ್ರಾನ್ ಭೀತಿ: ಯಾವುದೇ ದೇಶದಿಂದ ಬಂದರೂ ಕ್ವಾರಂಟೈನ್ ಕಡ್ಡಾಯ- ಆರೋಗ್ಯ ಸಚಿವ ಸುಧಾಕರ್

ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ಭೀತಿ ಹೆಚ್ಚಾಗಿರುವಂತೆಯೇ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ, ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಸಚಿವ ಕೆ ಸುಧಾಕರ್ ಸಭೆ
ಆರೋಗ್ಯ ಸಚಿವ ಕೆ ಸುಧಾಕರ್ ಸಭೆ

ಬೆಂಗಳೂರು: ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ಭೀತಿ ಹೆಚ್ಚಾಗಿರುವಂತೆಯೇ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ, ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ತೀವ್ರತೆಯ ಕುರಿತಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಇಲಾಖೆ ಸಮಿತಿ ಸಭೆ ಮಾಡಲಾಯಿತು. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ ಎಂದು ಚರ್ಚಿಸಲಾಗಿದೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಯಾವುದೇ ದೇಶದಿಂದ ಬಂದರೂ ಕೋವಿಡ್ ಪರೀಕ್ಷೆ ಕಡ್ಡಾಯ
ರಾಜ್ಯಕ್ಕೆ ಯಾವುದೇ ದೇಶದಿಂದ ಪ್ರಯಾಣಿಕರೂ ಬಂದರೂ ಅವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿರುತ್ತದೆ ಎಂದು ಹೇಳಿದ ಸುಧಾಕರ್ ಅವರು, ವಿದೇಶಗಳಿಂದ ರಾಜ್ಯಕ್ಕೆ ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ಬಂದಿಳಿಯುತ್ತಿದ್ದು, ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ದೇಶಗಳಿಂದ ಬಂದ ಪ್ರಯಾಣಿಕರಿಗೂ ಪರೀಕ್ಷೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ವಿದೇಶಗಳಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ನೆಗೆಟಿವ್ ಇದ್ದವರಿಗೆ ಏಳು ದಿನಗಳ ಕಾಲ ಮನೆ ಕ್ವಾರಂಟೈನ್ ಮಾಡಲಾಗುತ್ತದೆ. ರೋಗ ಲಕ್ಷಣವಿದ್ದರೂ, ನೆಗೆಟಿವ್ ಆದವರಿಗೆ 5ನೇ ದಿನ ಮತ್ತೆ ಮನೆಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಎ ಸಿಂಪ್ಟಮ್ಯಾಟಿಕ್ ಆದವರಿಗೆ 7 ನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೆ ಇಂಥವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದರು.

ಜಗತ್ತಿನ 12 ದೇಶಗಳಲ್ಲಿ ಕೋವಿಡ್ ನ ಹೊಸ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ರಾಜ್ಯದಲ್ಲೂ ಇದು ಬರಬಹುದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಜನಸಂಖ್ಯೆ, ಆರೋಗ್ಯ ಮೂಲಸೌಕರ್ಯಗಳನ್ನು ಪರಿಗಣಿಸಿದರೆ ಬೇರೆ ದೇಶಗಳಿಗಿಂತ ನಾವು ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಇದಕ್ಕಾಗಿ ಆರೋಗ್ಯ ವ್ಯವಸ್ಥೆಯಲ್ಲಿ ಮಾಡಬೇಕಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಹಾಸಿಗೆ, ಆಕ್ಸಿಜನ್ ಹಾಸಿಗೆ, ವೈದ್ಯರು ಹಾಗೂ ಅಧಿಕಾರಿಗಳ ನಿಯೋಜನೆ, ಔಷಧಿ ಪೂರೈಕೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಜನರು ಸುರಕ್ಷಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕಿದೆ. ಇದಕ್ಕಾಗಿ ಕೆಲ ಕ್ರಮಗಳನ್ನು ವಹಿಸಬೇಕೆಂದು ಸಲಹೆ ನೀಡಲಾಗಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು 41 ಲಕ್ಷ ಜನರು ಪಡೆಯಬೇಕಿದೆ. ಇದಕ್ಕಾಗಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದಲೂ ಮಾದರಿಗಳನ್ನು ಪಡೆಯುತ್ತಿದೆ. ಪ್ರತಿ ಪ್ರಯಾಣಿಕರ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಲಸಿಕೆ ಕಡ್ಡಾಯವಲ್ಲ
ಇನ್ನು ಲಸಿಕೆ ಪಡೆಯದೇ ಹೋದರೆ ಸರ್ಕಾರಿ ಸೌಲಭ್ಯ ನೀಡಬಾರದು ಎನ್ನುವ ಶಿಫಾರಸು ವಿಚಾರವಾಗಿ ಮಾತನಾಡಿದ ಸುಧಾಕರ್ ಅವರು, ಜನರಿಗೆ ಕಾನೂನು ತಂದು, ದಂಡ ಹಾಕಿ ಲಸಿಕೆ ಕೊಡೊ ಚಿಂತನೆ ಸರ್ಕಾರಕ್ಕೆ ಇಲ್ಲ. ಆದರೆ ಎರಡನೇ ಡೋಸ್ ಲಸಿಕೆ ಪಡೆಯದೇ ಇರುವವರಿಗೆ ಆಸ್ಪತ್ರೆ ವೆಚ್ಚ ಭರಿಸಬಾರದು ಎಂದು ಸಮಿತಿ ಶಿಫಾರಸ್ಸು ಮಾಡಿದೆ. ಇದರ ಜೊತೆ ಅನೇಕ ಶಿಫಾರಸು ತಜ್ಞರ ತಂಡ ಮಾಡಿದೆ. ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡೋ ಬಗ್ಗೆ ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕ್ವಾರಂಟೈನ್ ಕಡ್ಡಾಯ
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್ ಅವರು, 'ಸಿಎಂ ಸಭೆಗೆ ಪೂರಕವಾಗಿ ಸಭೆ ಆಗಿದೆ. ಓಮಿಕ್ರಾನ್ ಹೊಸ ತಳಿ ನಿಯಂತ್ರಣದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು, ಒಂದು ವೇಳೆ ವೈರಸ್ ಬಂದರೆ ಅದಕ್ಕೆ ಸಿದ್ಧತೆ ಹೇಗೆ ಇರಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚೆ ಮಾಡಿದ್ದೇವೆ. ವೈದ್ಯರು, ಆಸ್ಪತ್ರೆಗಳ ಸಿದ್ಧತೆ, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸಿದ್ಧತೆ, ಬೆಡ್ ಲಭ್ಯತೆ ಬಗ್ಗೆ ಚರ್ಚೆ ಆಗಿದೆ. ಮೊದಲು ಕ್ವಾರಂಟೈನ್ ವ್ಯವಸ್ಥೆ ಇತ್ತು, ಈಗ ಅದನ್ನು ಮತ್ತೆ ಜಾರಿ ಮಾಡುತ್ತೇವೆ. ವಿದೇಶದಿಂದ ಬರುವ ಎಲ್ಲರಿಗೂ RTPCR ಟೆಸ್ಟ್ ಮಾಡುತ್ತೇವೆ. ನೆಗೆಟಿವ್ ಬಂದರೆ ಮನೆಯಲ್ಲಿ ಒಂದು ವಾರ ಕ್ವಾರಂಟೈನ್ ಇರಬೇಕು. ರೋಗದ ಲಕ್ಷಣ ಇದ್ದರೆ 5ನೇ ದಿನ ಟೆಸ್ಟ್ ಮಾಡುತ್ತೇವೆ. ರೋಗದ ಲಕ್ಷಣ ಇಲ್ಲದೆ ಹೋದರೆ 7ನೇ ದಿನ ಟೆಸ್ಟ್ ಮಾಡಿ ಹೊರಗೆ ಓಡಾಟ ಮಾಡಲು ಅವಕಾಶ ಕೊಡುತ್ತೇವೆ ಎಂದು ಹೇಳಿದರು. 

ಚಿಕಿತ್ಸೆಗೆ ಮಾರ್ಗಸೂಚಿ
ಅಂತೆಯೇ ಟೆಲಿ ಮೆಡಿಸಿನ್, ಟೆಲಿ ಕೌನ್ಸಿಲಿಂಗ್ ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಚಿಕಿತ್ಸೆಗೆ ಯುನಿಫಾರ್ಮ್ ವ್ಯವಸ್ಥೆ ಮಾಡಲು ತಂಡ ರಚನೆ ಮಾಡಲಾಗುತ್ತದೆ. ಚಿಕಿತ್ಸೆ ಪ್ರೋಟೋ ಕಾಲ್‍ಗೆ ತಂಡ ರಚನೆಯಾಗಿದ್ದು, ಡಾ. ರವಿ ಅವರನ್ನು ಈ ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಸಮಿತಿಯಲ್ಲಿ 10 ಜನ ತಜ್ಞರು ಇದ್ದು, ಅಗತ್ಯ ಔಷಧಿ ದಾಸ್ತಾನು ಬಗ್ಗೆ ಸಭೆ ಆಗಿದೆ ಎಂದು ಹೇಳಿದ್ದಾರೆ.   

ಆದ್ಯತೆ ಮೇರೆಗೆ ಜಿಲ್ಲೆಗಳಿಗೆ ಲಸಿಕೆ
ಇನ್ನು ಲಸಿಕೆ ಕಡ್ಡಾಯವಾಗಿ 41 ಲಕ್ಷ ಜನ ಎರಡನೇ ಡೋಸ್ ಪಡೆಯಬೇಕು. ಇವರಿಗೂ ಪ್ರತಿ ಜಿಲ್ಲೆಯಲ್ಲಿ ಲಸಿಕೆ ಆದ್ಯತೆ ಮೇಲೆ ಕೊಡುತ್ತೇವೆ. ಇವರಿಗೆ ಲಸಿಕೆ ಕೊಟ್ಟರೆ ಶೇ.70ರಷ್ಟು ಲಸಿಕೆ ನೀಡಿಕೆ ಆಗುತ್ತದೆ. ಹೀಗಾಗಿ ಲಸಿಕೆ ನೀಡಲು ಕ್ರಮ ತಗೆದುಕೊಳ್ಳುತ್ತೇವೆ.  ಓಮಿಕ್ರಾನ್ ಹರಡುವಿಕೆ ಪ್ರಮಾಣ ಹೆಚ್ಚಿದ್ದು, ಅದರ ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜನರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ. ಲಸಿಕೆಯನ್ನು ಜನರು ಬಂದು ಪಡೆಯಬೇಕು. ಲಸಿಕೆ ರೋಗ ನಿರೋಧಕ ಸೃಷ್ಟಿ ಮಾಡುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಸಿಎಂ ಪತ್ರ
ಅಂತೆಯೇ ಹೈರಿಸ್ಕ್ ದೇಶದಿಂದ ಬರವ ಪ್ರಯಾಣಿಕರಿಗೆ ಕೆಲ ನಿರ್ಬಂಧ ಹಾಕುವ ಬಗ್ಗೆ ಸಿಎಂ ಚಿಂತನೆ ಮಾಡಿದ್ದಾರೆ. ಈ ಕುರಿತು ಸಿಎಂ ಬೊಮ್ಮಾಯಿ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ. ಪ್ರಾರಂಭಿಕ ಹಂತದಲ್ಲೇ ನಿಯಂತ್ರಣ ಮಾಡಲು ಸಿಎಂ ಈ ನಿರ್ಧಾರ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಿತ್ಯ ವಿದೇಶದಿಂದ 2.5 ಸಾವಿರ ಜನ ಬೆಂಗಳೂರಿಗೆ ಬರ್ತಾರೆ. ಎಲ್ಲರಿಗೂ RTPCR ಟೆಸ್ಟ್ ಕಡ್ಡಾಯ ಮಾಡಲಾಗುತ್ತೆ ಎಂದು ಸುಧಾಕರ್ ಹೇಳಿದರು.

ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಿರಿ. ನಿರ್ದಿಷ್ಟ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕೆಲ ನಿರ್ಬಂಧ ಹೇರುವಂತೆ ಮುಖ್ಯಮಂತ್ರಿಗಳು ಪ್ರಧಾನಿಗಳು ಪತ್ರ ಬರೆಯಲಿದ್ದಾರೆ. ವೈರಾಣು ಹರಡುವಿಕೆಯನ್ನು ಆರಂಭಿಕ ಹಂತದಲ್ಲೇ ತಡೆಯಲು ಪ್ರಯತ್ನ. ಎರಡನೇ ಡೋಸ್ ಪಡೆಯದವರಿಗೆ ಮಾಲ್, ಥಿಯೇಟರ್ ಗೆ ಪ್ರವೇಶ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದಿಂದ ವೆಚ್ಚ ಭರಿಸುವ ತೀರ್ಮಾನ ಹಿಂತೆಗೆತ ಮೊದಲಾದ ಸಲಹೆಗಳು ಬಂದಿವೆ. ಈ ಬಗ್ಗೆ ಇನ್ನೂ ಚರ್ಚಿಸಬೇಕಿದೆ. ಇಎಸ್‍ಐ ಆಸ್ಪತ್ರೆಯಲ್ಲಿ ರೋಗಿಯ ಶವದ ಕುರಿತಾದ ಸಮಸ್ಯೆ ಗಮನಕ್ಕೆ ಬಂದಿದ್ದು, ಈ ರೀತಿಯ ನಿರ್ಲಕ್ಷ್ಯ ವಹಿಸಬಾರದಿತ್ತು. ಇದು ಬಹಳ ವಿಷಾದನೀಯ ಸಂಗತಿ. ಈ ಬಗ್ಗೆ ಸೂಚನೆ ನೀಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com