ರಾಜ್ಯ

ಮಾಲ್, ಚಿತ್ರಮಂದಿರ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯಗೊಳಿಸಿದ ಬಿಬಿಎಂಪಿ!

Manjula VN

ಬೆಂಗಳೂರು: ಓಮಿಕ್ರಾನ್ ಆತಂಕ ಬೆನ್ನಲ್ಲೇ ರಾಜ್ಯ ಸರ್ಕಾರ ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಾಲ್, ಚಿತ್ರಮಂದಿರ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಎರಡು ಡೋಸ್ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ. ಇದರ ಜೊತೆಗೆ ಮಾಲ್ ಗಳ ಮಾಲೀಕರು ಹಾಗೂ ಕಾರ್ಯಕ್ರಮಗಳ ಆಯೋಜಕರು ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗಪ್ತಾ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ನಿರ್ದೇಶನಗಳು ಹಾಗೂ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಮಾಲ್, ಚಿತ್ರಮಂದಿರಗಳಿಗೆ ಬರುವ ಜನರು 2 ಡೋಸ್ ಲಸಿಕೆ ಪಡೆದಿರುವ ಕುರಿತು ಪರಿಶೀಲಿಸುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಸಾಮಾಜಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಅದನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಿಯಮಗಳ ಪಾಲನೆ ಮಾಡುತ್ತಿರುವುದನ್ನು ಪ್ರತೀನಿತ್ಯ ಪರಿಶೀಲನೆ ಮಾಡಲು ಸಾಧ್ಯವಾಗದಿದ್ದರೂ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮಗಳ ಕೈಗೊಳ್ಳಲಾಗುತ್ತದೆ. ಇದೀಗ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ಜನರು 2ನೇ ಡೋಸ್ ಲಸಿಕೆ ಪಡೆದುಕೊಳ್ಳಲು ಮುಂಬರುತ್ತಿದ್ದಾರೆ. ಮೊಬೈಲ್ ವ್ಯಾಕ್ಸಿನ್ ಕ್ಯಾಂಪ್ ಗಳನ್ನೂ ಕೂಡ ನಡೆಸಲಾಗುತ್ತಿದೆ ಎಂದಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳುವಲ್ಲಿ ಸಮಸ್ಯೆಗಳು ಎದುರಾಗಿದ್ದೇ ಆದರೆ, ಅವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಶೇ.99ರಷಅಟು ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ.66 ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಮಾಸ್ಕ್ ಧರಿಸದೆ ಹೊರಗೆ ಬಂದವರಿಂದ ಒಟ್ಟಾರೆ ರೂ.1 ಕೋಟಿ ದಂಡ ಸ್ವೀಕರಿಸಿದೆ ಎಂದು ಮತ್ತೊಬ್ಬ ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

SCROLL FOR NEXT