ರಾಜ್ಯ

ಮಧ್ಯಾಹ್ನದ ಬಿಸಿಯೂಟ ಆಹಾರ ಮೆನುವಿನಿಂದ ಮೊಟ್ಟೆ, ಬಾಳೆಹಣ್ಣು ಕೈ ಬಿಡಿ: ಸಿಎಂಗೆ ಸ್ವಾಮೀಜಿಗಳ ಒತ್ತಾಯ

Nagaraja AB

ಬಾಲ್ಕಿ: ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಡಿ 1 ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ ದೇವರು ನೇತೃತ್ವದಲ್ಲಿನ ಅನೇಕ ಮಠಗಳ ಸ್ವಾಮೀಜಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬದಲಿಗೆ ಎಲ್ಲರೂ ಸೇವಿಸಬಹುದಾದ ಪೌಷ್ಠಿಕ ಆಹಾರ ನೀಡುವಂತೆ ಸಲಹೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ವಲಯದ ಲಿಂಗಾಯತ ಸ್ವಾಮೀಜಿಗಳ ಪರವಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾಮೀಜಿಗಳು ಮನವಿಯನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮನವಿಯನ್ನು ಓದಿದ ಬಸವಲಿಂಗ ಪಟ್ಟದ ದೇವರು, ಬಸವಾದಿ ಶರಣರು ಮತ್ತು ಲಿಂಗಾಯಿತರು ಮಾಂಸಾಹಾರ ವಿರೋಧಿಗಳು. ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಸಮುದಾಯ ಸಸ್ಯಾಹಾರಿಗಳಾಗಿದ್ದಾರೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆ ಹಣ್ಣು ಕೊಡುವುದರ ಬದಲಿಗೆ ಎಲ್ಲರೂ ಸೇವಿಸಬಹುದಾದ ಸಸ್ಯಾಹಾರಿ ಪೌಷ್ಠಿಕ ಆಹಾರ ನೀಡಬೇಕು ಎಂದು ಹೇಳಿದರು. 

ಈ ಹಿಂದಿನ ಸರ್ಕಾರ ಕೂಡಾ ಮೊಟ್ಟೆ ಹಾಗೂ ಬಾಳೆಹಣ್ಣು ನೀಡುವ ಕಾರ್ಯಕ್ರಮವನ್ನು ಚಾಲನೆಗೊಳಿಸಿತ್ತು. ಆದರೆ, ವಿರೋಧ ವ್ಯಕ್ತವಾದ ನಂತರ ಆಹಾರ ಮೆನುವಿನಿಂದ ಮೊಟ್ಟೆ, ಬಾಳೆಹಣ್ಣು ಕೊಡುವುದನ್ನು ನಿಲ್ಲಿಸಲಾಗಿತ್ತು. ಮಹಾರಾಷ್ಟ್ರ ಸರ್ಕಾರ ಕೂಡಾ ಮೊಟ್ಟೆ, ಬಾಳೆಹಣ್ಣು ನೀಡುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ತಿಳಿಸಿದರು.

ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ನೂರಾರು ಸ್ವಾಮೀಜಿಗಳ ಸಹಿ ಇರುವ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಡಿಸೆಂಬರ್ 1 ರಿಂದ ಮಧ್ಯಾಹ್ನದ ಬಿಸಿಯೂಟ ಭಾಗವಾಗಿ ವಾರಕ್ಕೆ ಮೂರು ಬಾರಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲಾಗುತ್ತಿದೆ. 

SCROLL FOR NEXT