ರಾಜ್ಯ

ಮೈಸೂರು ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ: ಕೆ.ಸಿ. ನಾರಾಯಣಗೌಡ

Nagaraja AB

ಬೆಂಗಳೂರು: ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳ ಬೇಡಿಕೆ ಪೂರೈಸಲು ಕೆಎಸ್ ಐಸಿಗೆ 192 ಹೆಚ್ಚುವರಿ ವಿದ್ಯುತ್ ಕೈಮಗ್ಗಗಳನ್ನು ಒದಗಿಸುವುದರೊಂದಿಗೆ ಉತ್ಪಾದನೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಸೋಮವಾರ ತಿಳಿಸಿದ್ದಾರೆ. 

ಪ್ರಸ್ತುತ ಕೆಎಸ್ ಐಸಿ ಪ್ರತಿ ತಿಂಗಳು 70,000 ಮೀಟರ್ ರೇಷ್ಮೆ ಸೀರೆಗಳನ್ನು ಉತ್ಪಾದಿಸುತ್ತಿದೆ. ಹೆಚ್ಚುವರಿ ವಿದ್ಯುತ್ ಕೈಮಗ್ಗಗಳಿಂದ ಅದರ ತಿಂಗಳ ಉತ್ಪಾದನೆ ಸುಮಾರು 1 ಲಕ್ಷ ಮೀಟರ್ ಗೆ ಹೆಚ್ಚಾಗಲಿದೆ. ನಾವು ದೊಡ್ಡದಾದ ಗುರಿ ಹೊಂದಿದ್ದು, ಉತ್ಪಾದನೆ ಅಗತ್ಯತೆ ಪೂರೈಸಲು ಹೆಚ್ಚುವರಿ ಕೈಮಗ್ಗ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹಾಸನ, ತುಮಕೂರು, ಬಳ್ಳಾರಿ, ವಿಜಯಪುರ ಮತ್ತು ಬೆಳಗಾವಿಯ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯಲ್ಲಿರುವ ಬಳಕೆಯಾಗದ ವಿದ್ಯುತ್ ಕೈಮಗ್ಗಳನ್ನು ದುರಸ್ಥಿ ಮಾಡಿ, ಮೈಸೂರು ಮತ್ತು ಚನ್ನಪಟ್ಟಣಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ದೇಶ ಹಾಗೂ ಹೊರ ದೇಶದಲ್ಲಿ ಮೈಸೂರು ರೇಷ್ಮೆ ಸೀರಿಗಳಿಗೆ ಬೇಡಿಕೆಯಿದೆ. ಹೆಚ್ಚಿನ ಗುಣಮಟ್ಟದ ರೇಷ್ಮೆ ಸೀರೆ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಪ್ರಸ್ತುತ ಮೈಸೂರು ಹಳೆಯ ಮಿಲ್ ನಲ್ಲಿ 159, ಮೈಸೂರು ಹೊಸ ಮಿಲ್ ನಲ್ಲಿ 60 ಮತ್ತು ಚನ್ನಪಟ್ಟಣದಲ್ಲಿ 30 ವಿದ್ಯುತ್ ಕೈಮಗ್ಗ ಗಳು ಇವೆ. ಹೊಸ ವಿದ್ಯುತ್ ಕೈಮಗ್ಗ ಗಳನ್ನು ಅಳವಡಿಸಿದ ನಂತರ ಎರಡು ಪಾಳಿಯಲ್ಲಿ ರೇಷ್ಮೆ ಸೀರೆ ಉತ್ಪಾದಿಸಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಸಚಿವರ ಕಚೇರಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

SCROLL FOR NEXT