ರಾಜ್ಯ

ಬಿಬಿಎಂಪಿಗೆ ಬಿಗ್ ರಿಲೀಫ್: ಓಮಿಕ್ರಾನ್ ಸೋಂಕಿತ ವೈದ್ಯನ ಸಂಪರ್ಕಕ್ಕೆ ಬಂದವರ 'Omicron' ರಿಪೋರ್ಟ್ ನೆಗೆಟಿವ್!

Srinivasamurthy VN

ಬೆಂಗಳೂರು: ಓಮಿಕ್ರಾನ್ ಸೋಂಕಿತ 46 ವರ್ಷದ ವೈದ್ಯನೊಂದಿಗೆ ಸಂಪರ್ಕ ಹೊಂದಿದ್ದ ಐದು ಸಂಪರ್ಕಿತರ ಮಾದರಿಗಳ ಪ್ರಾಥಮಿಕ ವರದಿಯು ಹೊಸ ಓಮಿಕ್ರಾನ್ ರೂಪಾಂತರಕ್ಕೆ ನಕಾರಾತ್ಮಕವಾಗಿದೆ ಎಂದು ತಿಳಿದುಬಂದಿದೆ.

ಹೌದು.. ರಾಜ್ಯದ ಮೊಟ್ಟ ಮೊದಲ ಓಮಿಕ್ರಾನ್ ಪ್ರಕರಣ ಎಂಬ ಕಾರಣಕ್ಕಾಗಿಯೇ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ 46 ವರ್ಷದ ವೈದ್ಯನೊಂದಿಗೆ ಸಂಪರ್ಕ ಹೊಂದಿದ್ದ ಐದು ಸಂಪರ್ಕಿತರ ಮಾದರಿಗಳ ಪರೀಕ್ಷಾ ಫಲಿತಾಂಶ ಇದೀಗ ಲಭ್ಯವಾಗಿದ್ದು, ಅವರೆಲ್ಲರ ಜಿನೋಮ್ ಸಿಕ್ವೆನ್ಸಿಂಗ್ ವರದಿಯಲ್ಲಿ ಓಮಿಕ್ರಾನ್ ನೆಗೆಟಿವ್ ರಿಪೋರ್ಟ್ ಬಂದಿದೆ.  ಆ ಮೂಲಕ ಬಿಬಿಎಂಪಿಯ ದೊಡ್ಡ ತಲೆನೋವು ನಿವಾರಣೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಅಯುಕ್ತ ಗೌರವ್ ಗುಪ್ತಾ ಅವರು, ಈ ಹಿಂದೆ ವೈದ್ಯರ ಸಂಪರ್ಕಕ್ಕೆ ಬಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದ್ದ ಐದು ಮಂದಿಯ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಅದರ ರಿಪೋರ್ಟ್ ಈಗ ಬಂದಿದ್ದು, ಎಲ್ಲರ ವರದಿ ಓಮಿಕ್ರಾನ್ ಗೆ ನೆಗೆಟಿವ್ ಆಗಿದೆಯಾದರೂ ಡೆಲ್ಟಾ ರೂಪಾಂತರಕ್ಕೆ ಪಾಸಿಟಿವ್ ಬಂದಿದೆ. ಹೀಗಾಗಿ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ, ಭಯಪಡುವ ಅಗತ್ಯವಿಲ್ಲ.  ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವರದಿಯನ್ನು ಇನ್ನೂ ಪ್ರಕಟಿಸಬೇಕಾಗಿದೆ ಎಂದು ಹೇಳಿದರು.

ಮಾದರಿಗಳನ್ನು ಡಿಸೆಂಬರ್ 1 ರಂದು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದೆಯಾದರೂ, ಅಧಿಕೃತ ಘೋಷಣೆ ಮಾಡುವ ಮೊದಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಎನ್‌ಸಿಬಿಎಸ್ ಪ್ರಯೋಗಾಲಯ ಮತ್ತು ಕೇಂದ್ರ ಸರ್ಕಾರದಿಂದ ಲಿಖಿತ ಸಂವಹನಕ್ಕಾಗಿ ಕಾಯುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
 

SCROLL FOR NEXT