ರಾಜ್ಯ

ವಾಯುಪಡೆ ಹೆಲಿಕಾಪ್ಟರ್ ದುರಂತ: ವರುಣ್ ಒಬ್ಬ ಯೋಧ, ಜೀವನ್ಮರಣ ಹೋರಾಟದಲ್ಲಿ ಗೆದ್ದು ಬರುತ್ತಾನೆ- ತಂದೆಯ ವಿಶ್ವಾಸದ ನುಡಿ

Nagaraja AB

ಬೆಂಗಳೂರು: ಸಿಡಿಎಸ್  ಜನರಲ್ ಬಿಪಿನ್ ರಾವತ್ ಮತ್ತಿತರ 12 ಮಂದಿ ಮೃತಪಟ್ಟಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವರೊಬ್ಬ ಯೋಧರಾಗಿದ್ದು, ಜೀವನ್ಮರಣ ಹೋರಾಟದಲ್ಲಿ ಗೆದ್ದು ಬರಲಿದ್ದಾರೆ ಎಂದು ಅವರ ತಂದೆ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರುಣ್ ಸಿಂಗ್ ಆರೋಗ್ಯದಲ್ಲಿ ತುಂಬಾ ಏರಿಳಿತವಿದ್ದು, ಏನನ್ನೂ ಹೇಳಲು ಸಾಧ್ಯವಿಲ್ಲ. ಪ್ರತಿ ಗಂಟೆಯೂ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ವರುಣ್ ಸಿಂಗ್ ಅವರ ತಂದೆ ಕರ್ನಲ್ ಕೆ. ಪಿ. ಸಿಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಗಂಟೆ ಗಂಟೆಗೂ ನಿಗಾ ವಹಿಸಲಾಗಿದ್ದು, ಉಸಿರಾಟದಲ್ಲಿ ಏರುಪೇರು ಆಗುತ್ತಿದೆ. ಎನನ್ನೂ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಚರ್ಚಿಸುತ್ತಿದ್ದಾರೆ. ಒಳ್ಳೆಯ ವೈದ್ಯರಿಂದ ವರುಣ್ ಸಿಂಗ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿವೃತ್ತ ಸೇನಾಧಿಕಾರಿಯೂ ಆಗಿರುವ ಕೆ. ಪಿ. ಸಿಂಗ್ ತಿಳಿಸಿದ್ದಾರೆ. 

ಅತ್ಯುತ್ತಮ ತಜ್ಞರಿಂದ ಉತ್ತಮ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ದೇಶದ ಎಲ್ಲಾ ಜನರ ಪ್ರಾರ್ಥನೆ ಅಲ್ಲಿದೆ. ಅವರ ಪರಿಚಯವಿಲ್ಲದ ಅಥವಾ ನಿವೃತ್ತರಾಗಿರುವ ಅಥವಾ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಜನರು ಭೇಟಿಯಾಗಲು ಬಂದಿದ್ದರಿಂದ ನನನ್ನು ಭಾವನಾತ್ಮಕಗೊಳಿಸಿದೆ. ಮಹಿಳೆಯರು ಕೂಡಾ ವರುಣ್ ನೋಡಲು ಬರುತ್ತಿದ್ದಾರೆ. ಈ ರೀತಿಯ ಪ್ರೀತಿ, ವಾತ್ಸಲ್ಯವನ್ನು ವರುಣ್ ಸಿಂಗ್ ಪಡೆದಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.

ವರುಣ್ ಸಿಂಗ್ ಯೋಧರಾಗಿದ್ದು, ಖಂಡಿತವಾಗಿಯೂ ವಿಜಯಶಾಲಿಯಾಗಿ ಹೊರ ಬರಲಿದ್ದಾರೆ ಎಂದು ಕೆ. ಪಿ. ಸಿಂಗ್ ಹೇಳಿದರು. ಕಳೆದ ವರ್ಷ ದೊಡ್ಡ ತಾಂತ್ರಿಕ ದೋಷದಿಂದ ತೇಜಸ್ ಯುದ್ಧ ವಿಮಾನದ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದರಿಂದ ವರುಣ್ ಸಿಂಗ್ ಅವರಿಗೆ ಈ ವರ್ಷದ ಆಗಸ್ಟ್ ನಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

SCROLL FOR NEXT