ರಾಜ್ಯ

ಕಮಾಂಡ್ ಆಸ್ಪತ್ರೆಗೆ ಭೇಟಿ: ವರುಣ್ ಸಿಂಗ್ ಆರೋಗ್ಯ ವಿಚಾರಿಸಿದ ಸಚಿವ ಆರಗ ಜ್ಞಾನೇಂದ್ರ

Nagaraja AB

ಬೆಂಗಳೂರು: ಇತ್ತೀಚಿಗೆ ತಮಿಳುನಾಡಿನ ಕುನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ವಾಯುಪಡೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಭೇಟಿ ನೀಡಿದರು. 

ಇಂದು ಬೆಳಗ್ಗೆ ಕಮಾಂಡ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ವರುಣ್ ಸಿಂಗ್ ಅವರ ಆರೋಗ್ಯ ಪರಿಸ್ಥಿತಿ ಕುರಿತಂತೆ ವಿಚಾರಿಸಿದರು. ವರುಣ್ ಸಿಂಗ್ ಅವರ ಪೋಷಕರೊಂದಿಗೂ ಮಾತುಕತೆ ನಡೆಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಸಂದರ್ಭದಲ್ಲಿ ಗೃಹ ಸಚಿವರ ಜೊತೆಯಲ್ಲಿದ್ದರು.

ತಮಿಳುನಾಡಿನ ಕುನೂರು ಬಳಿ ಕಳೆದ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮಧುಲಿಕಾ ರಾವತ್ ಮತ್ತಿತರ 11 ಮಂದಿ ಮೃತಪಟ್ಟಿದ್ದರು. ಈ ದುರಂತದಲ್ಲಿ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು,  ಅವರನ್ನು ತಮಿಳುನಾಡಿನ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಿಂದ ಗುರುವಾರ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. 

ಸುಟ್ಟ ಗಾಯಗಳಿಂದ ಜೀವನ್ಮಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಅವರ ಪ್ರಾಣ ಉಳಿಸಲು ಕಮಾಂಡ್ ಆಸ್ಪತ್ರೆ  ವೈದ್ಯರು ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT