ರಾಜ್ಯ

10 ಸಾವಿರ ನಿವೇಶನಗಳನ್ನು ಹರಾಜು ಹಾಕಿ 15 ಸಾವಿರ ಕೋಟಿ ರೂ. ಆದಾಯ ಸಂಗ್ರಹಕ್ಕೆ ಬಿಡಿಎ ಮುಂದು!

Sumana Upadhyaya

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಸಮಗ್ರ ಭೂ ಲೆಕ್ಕಪರಿಶೋಧನೆಯು(Audit) ಈಗ ಹರಾಜು ಮಾಡಲು ಯೋಜಿಸಿರುವ ಹಳೆಯ ಲೇಔಟ್‌ಗಳಲ್ಲಿ ಸುಮಾರು 10 ಸಾವಿರ ನಿವೇಶನಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಇದರಿಂದಾಗಿ 10 ಸಾವಿರ ಕೋಟಿಯಿಂದ 15 ಸಾವಿರ ಕೋಟಿ ರೂಪಾಯಿಗಳವರೆಗೆ ಕ್ರೋಢೀಕರಿಸಲು ನೋಡುತ್ತಿದೆ. ಇದು ಬಿಡಿಎಯನ್ನು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಿಂದ ಹೊರತರಲು ಸಹಾಯ ಮಾಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. 

ಇದುವರೆಗೆ ಬಿಡಿಎಯ ಸಾಮಾನ್ಯ (ಮಧ್ಯಂತರ) ಸೈಟ್‌ಗಳನ್ನು ಲಾಟರಿ ವ್ಯವಸ್ಥೆಯ ಮೂಲಕ ಹಂಚಲಾಗುತ್ತಿತ್ತು ಆದರೆ ಕಾರ್ನರ್(ಮೂಲೆಭಾಗದ) ನಿವೇಶನಗಳನ್ನು ಮಾತ್ರ ಮೊದಲು ಹರಾಜು ಮಾಡಲಾಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ  ಭೂಪರಿಶೋಧನೆ ಪೂರ್ಣಗೊಂಡು ಅದರ ಸಂಶೋಧನೆಗಳನ್ನು ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೈಟ್‌ಗಳನ್ನು ಹರಾಜು ಮಾಡುವಂತೆ ನಮಗೆ ಆದೇಶಿಸಿದೆ. ಹೀಗಾಗಿ 500 ಸೈಟ್‌ಗಳೊಂದಿಗೆ 15 ದಿನಗಳಲ್ಲಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೋಡುತ್ತಿದ್ದೇವೆ ಎಂದು ಹೇಳಿದರು.

ಎಚ್‌ಎಸ್‌ಆರ್‌ ಲೇಔಟ್‌, ಅಂಜನಾಪುರ, ಬನಶಂಕರಿ, ಇಂದಿರಾನಗರ ಸೇರಿದಂತೆ 64 ಬಿಡಿಎ ಬಡಾವಣೆಗಳಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದ್ದು, ವಿವಿಧ ಆಯಾಮಗಳ ನಿವೇಶನಗಳನ್ನು ಗುರುತಿಸಲಾಗಿದೆ. ಬಿಡಿಎ ಈಗಷ್ಟೇ 400 ಮೂಲೆ ನಿವೇಶನಗಳ ಹರಾಜಿಗೆ ಸೂಚನೆ ನೀಡಿದೆ. ನಾವು ಕಾರ್ನರ್ ಸೈಟ್‌ಗಳು ಮತ್ತು ಮಧ್ಯಂತರ ಸೈಟ್‌ಗಳನ್ನು ಪರ್ಯಾಯವಾಗಿ ಹರಾಜು ಮಾಡುತ್ತೇವೆ. ಈ ಪ್ರತಿಯೊಂದು ಸೈಟ್‌ಗಳು ನಮ್ಮ ಪ್ರಮುಖ ಪ್ರದೇಶಗಳಲ್ಲಿರುವುದರಿಂದ ನಮಗೆ ಉತ್ತಮ ಮೊತ್ತವನ್ನು ಹರಾಜಿನಿಂದ ತಂದುಕೊಡಲಿದೆ ಎಂಬ ಭರವಸೆಯಿದೆ ಎಂದರು.

ಈ ನಿವೇಶನಗಳ ಕುರಿತು ಕೆಲವು ವಿವರಗಳನ್ನು ಪ್ರಸ್ತುತ ಸಂಗ್ರಹಿಸಲಾಗುತ್ತಿದೆ. ಎನ್ಕಂಬ್ರೆನ್ಸ್ ಸರ್ಟಿಫಿಕೇಟ್, ಸೈಟ್ ಸರ್ವೆ ನಂಬರ್ ಮತ್ತು ವ್ಯಾಜ್ಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಇಐ ಟೆಕ್ನಾಲಜೀಸ್ ಲಿಮಿಟೆಡ್ ಲೆಕ್ಕಪರಿಶೋಧನೆಯನ್ನು ನಡೆಸಿದ್ದು ಈ ವರ್ಷ ಜೂನ್‌ನಲ್ಲಿ ಮುಕ್ತಾಯವಾಯಿತು. ಅದರಲ್ಲಿ 11 ಸಾವಿರದ 580 ಎಕರೆ ಬಿಡಿಎ ಜಮೀನು ಗುರುತಿಸಲಾಗಿದೆ.

ತಡವಾಗಿ ಆಡಿಟ್ ಮಾಡಲಾಗಿದ್ದರೂ ಬಿಡಿಎ ಈಗ ಬಲವಾದ ಅಂಕಿಅಂಶಗಳನ್ನು ಹೊಂದಿದೆ. ನಾವು ಹೊಂದಿರುವ ಪ್ರತಿಯೊಂದು ಭೂಮಿಯನ್ನು ತಿಳಿದುಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಹಿಂದಿನಂತೆ ಹಗರಣಗಳು ಮರುಕಳಿಸಲು ಸಾಧ್ಯವಿಲ್ಲ. ಐಟಿ ಕೌಶಲಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಗರವೊಂದು ತನ್ನ ಆಸ್ತಿಗಳ ಡಿಜಿಟಲ್ ದಾಖಲೆಯನ್ನು ಇತ್ತೀಚೆಗೆ ಸೃಷ್ಟಿಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಕೂಡ ಅಧಿಕಾರಿ ಹೇಳಿದರು.

SCROLL FOR NEXT