ರಾಜ್ಯ

ಆಕ್ರಮಣಕಾರಿ ನಾಯಿಗಳಿಗೆ ಕಬ್ಬನ್ ಪಾರ್ಕ್ ಪ್ರವೇಶ ನಿಷೇಧ; ತೋಟಗಾರಿಕಾ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Srinivasamurthy VN

ಬೆಂಗಳೂರು: ಕಬ್ಬನ್‍ಪಾರ್ಕ್‍ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಈ ಸಂಬಂಧ ತೋಟಗಾರಿಕಾ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಸಾಕು ನಾಯಿಗಳನ್ನು ಕರೆತರುವವರು ನಾಯಿಯ ಜತೆಗೆ ಸ್ಕೂಪ್ (ನಾಯಿಯ ಮಲ ತೆಗೆಯುವ ಪರಿಕರ) ಅನ್ನೂ ಕಡ್ಡಾಯವಾಗಿ ತರಬೇಕು. ಜತೆಗೆ ಗರಿಷ್ಠ ಆರು ಅಡಿ ಉದ್ದ ಮೀರದಂತೆ ಚೈನ್ ಅನ್ನು ಹಾಕಿ ಕರೆತರಬೇಕು. ರಾಜ್ಯ ತೋಟಗಾರಿಕೆ ಇಲಾಖೆಯು ಉದ್ಯಾನಕ್ಕೆ ಶ್ವಾನಗಳನ್ನು ಕರೆತರುವ ಶ್ವಾನ ಮೇಲ್ವಿಚಾರಕರಿಗೆ ಹೊಸದಾಗಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶಿಸಿದೆ.

ಕಬ್ಬನ್‍ಪಾರ್ಕ್‍ಗೆ ಸಾಕು ನಾಯಿಗಳನ್ನು ಕರೆತರುವುದರಿಂದ ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಉಗ್ರ ಸ್ವರೂಪದ ನಾಯಿಗಳು ಜನರ ಬಳಿಗೆ ಬರುವುದು, ಕಂಡ ಕಂಡಲ್ಲಿ ಮಲ, ಮೂತ್ರ ಮಾಡುತ್ತವೆ. ನಾಯಿಗಳ ಉಪಟಳ ಹೆಚ್ಚಾಗಿದೆ ಎಂದು ಕಬ್ಬನ್‍ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಕಬ್ಬನ್‍ಪಾರ್ಕ್ ಒಳಗಡೆ ನಾಯಿಗಳ ಉಪಟಳ ತಡೆಯಲು ಬಿಬಿಎಂಪಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯವೇ ನೋಟಿಸ್ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸಾಕು ನಾಯಿಗಳ ಮಾಲೀಕರು ತಾವು ಕರೆತರುವ ನಾಯಿಗಳಿಂದ ಇತರರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಸಲಹೆ ನೀಡಿದೆ. ಸಾಕು ನಾಯಿಗಳು ಆರೋಗ್ಯವಾಗಿ ಹಾಗೂ ಸ್ವಚ್ಛವಾಗಿ ಇರುವಂತೆ ಮಾಲೀಕರು ನೋಡಿಕೊಳ್ಳಲು ಸಲಹೆ ನೀಡಿದೆ. ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಿರುವ ಬಗ್ಗೆ ಖಚಿತಪಡಿಸಿಕೊಂಡಿರಬೇಕು. ಉಗ್ರ ಸ್ವಭಾವದ/ದೊಡ್ಡ ತಳಿಯ ನಾಯಿಗಳನ್ನು ಉದ್ಯಾನಕ್ಕೆ ಕರೆ ತರುವುದನ್ನು ನಿರ್ಬಂಧಿಸಲಾಗಿದೆ. ಮಕ್ಕಳು ಆಟವಾಡುವ ಪ್ರದೇಶ ಹಾಗೂ ವಾಯು ವಿಹಾರದ ಸ್ಥಳಗಳ ಹತ್ತಿರ ಬೀದಿ ನಾಯಿಗಳಿಗೆ ಆಹಾರ ನೀಡದೆ ಇರಲು ಸಲಹೆ ನೀಡಿದೆ. ಉದ್ಯಾನದಲ್ಲಿ ಸಾಕು ನಾಯಿಗಳು ಕಚ್ಚಿದಲ್ಲಿ ಇಲ್ಲವೇ ಗಾಯ ಮಾಡಿದಲ್ಲಿ ಅವುಗಳ ಮಾಲೀಕರೇ ಹೊಣೆಗಾರರಾಗಿರುತ್ತಾರೆ ಮತ್ತು ಈ ಸಂಬಂಧ ಇಂತಹ ಅಪಾಯಕ್ಕೆ ತಗಲುವ ವೆಚ್ಚಕ್ಕೆ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ತಿಳಿಸಿದರು.

ಈ ಕುರಿತು ಕಬ್ಬನ್ ಉದ್ಯಾನದಲ್ಲಿ ಫಲಕಗಳನ್ನು ಅಳವಡಿಸಲಾಗುವುದು. ಬಿಬಿಎಂಪಿಯು ಕೆರೆಗಳಲ್ಲಿ ಸಾಕು ಪ್ರಾಣಿಗಳನ್ನು ಅನುಮತಿಸುವ ಬಗ್ಗೆ ಹೊರಡಿಸಿರುವ ಸುತ್ತೋಲೆಯಂತೆ ಕಬ್ಬನ್ ಉದ್ಯಾನದಲ್ಲಿ ಕೂಡ ಮಾರ್ಗಸೂಚಿಗಳ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದರು.

SCROLL FOR NEXT