ರಾಜ್ಯ

ಬೆಳಗಾವಿಯಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ, ನೈಜೀರಿಯಾದಿಂದ ಹಿಂದಿರುಗಿದ ವ್ಯಕ್ತಿಗೆ ಪಾಸಿಟಿವ್

Lingaraj Badiger

ಬೆಳಗಾವಿ: ಇತ್ತೀಚೆಗಷ್ಟೇ ನೈಜೀರಿಯಾದಿಂದ ವಾಪಸಾಗಿದ್ದ ಅಜಂ ನಗರದ ನಿವಾಸಿ 53 ವರ್ಷದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿದ್ದು, ಇದು ಬೆಳಗಾವಿಯಲ್ಲಿ ಪತ್ತೆಯಾದ ಮೊದಲ ಕೋವಿಡ್-19 ಹೊಸ ರೂಪಾಂತರಿ ಪ್ರಕರಣವಾಗಿದೆ.

ಮೂಲಗಳ ಪ್ರಕಾರ, ಸೋಂಕಿತ ವ್ಯಕ್ತಿಯು ಈಗಾಗಲೇ ನೈಜೀರಿಯಾದಲ್ಲಿ ಕೋವಿಡ್‌ಶೀಲ್ಡ್‌ನ ಎರಡು ಡೋಸ್ ಲಸಿಕೆ ಪಡೆದಿದ್ದರು. ಅವರು ಡಿಸೆಂಬರ್ 13, 2021 ರಂದು ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ ನಂತರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆದಾಗ್ಯೂ, ಅವರ ಪರೀಕ್ಷಾ ವರದಿ ಬರುವ ಮುನ್ನವೇ ಅವರಿಗೆ ತಕ್ಷಣದ ವಿಮಾನದ ಮೂಲಕ ಬೆಳಗಾವಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.

ಡಿಸೆಂಬರ್ 14 ರಂದು ಈ ವ್ಯಕ್ತಿಯ ವರದಿಯ ಪರೀಕ್ಷಾ ವರದಿ ಬಂದಿದ್ದು, ಓಮಿಕ್ರಾನ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರು ಈಗಾಗಲೇ ಬೆಳಗಾವಿ ತಲುಪಿದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ನಂತರ, ಆ ವ್ಯಕ್ತಿಯನ್ನು ಅವರ ನಿವಾಸದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಪ್ರತ್ಯೇಕಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬೆಳಗಾವಿ ಸಿಟಿ ಕಾರ್ಪೊರೇಷನ್ ಆರೋಗ್ಯ ಅಧಿಕಾರಿ ಡಾ ಸಂಜಯ್ ಡುಮ್‌ಗೋಳ್ ಅವರು, ಅಜಮ್ ನಗರದ ವ್ಯಕ್ತಿ ಓಮಿಕ್ರಾನ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ ಮತ್ತು ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಸಲಾಗಿದೆ. ಅವರ ಕುಟುಂಬ ಸದಸ್ಯರು ಸೇರಿದಂತೆ ಅವರ ಸುಮಾರು 10 ಪ್ರಾಥಮಿಕ ಸಂಪರ್ಕಿತರನ್ನು ಈಗಾಗಲೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ವರದಿಗಾಗಿ ಕಾಯಲಾಗುತ್ತಿದೆ ಎಂದು ಅವರು ಹೇಳಿದರು.

ವಿಮಾನದಲ್ಲಿ ಆ ವ್ಯಕ್ತಿಯೊಂದಿಗೆ ಪ್ರಯಾಣಿಸಿದ ವ್ಯಕ್ತಿಗಳನ್ನೂ ಸಹ ಪರೀಕ್ಷಿಸಲಾಗುವುದು ಎಂದು ಡುಮ್ ಗೋಳ್ ಅವರು ಹೇಳಿದ್ದಾರೆ.

SCROLL FOR NEXT