ರಾಜ್ಯ

ನಾಳೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ: ಸಭಾಪತಿ ಬಸವರಾಜ ಹೊರಟ್ಟಿ ತೀರ್ಮಾನ

Nagaraja AB

ಬೆಳಗಾವಿ: ನಾಳೆ ಬೆಳಗ್ಗೆ 10-30ಕ್ಕೆ ವಿಧಾನಮಂಡಲ ಅಧಿವೇಶನವನ್ನು ಆರಂಭಿಸಲಾಗುತ್ತದೆ. ಮೊದಲ ಒಂದು ಗಂಟೆ ಪ್ರಶ್ನೋತ್ತರಗಳಿಗೆ ಅವಕಾಶ ಕಲ್ಪಿಸಿ, ನಂತರ ಇಡೀ ದಿನದ ಕಲಾಪವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶ, ಆಸ್ತಿಪಾಸ್ತಿ ನಷ್ಟ, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಮೀಸಲಿಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಬೆಳಗ್ಗೆ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಲಕ್ಷ್ಮಣ ಸವದಿ, ಶ್ರೀಕಂಠೇಗೌಡ ಮತ್ತು ಸಿ.ಎಂ. ಇಬ್ರಾಹಿಂ ಮಾತನಾಡಿ, ಅಧಿವೇಶನ ಆರಂಭವಾದಾಗಿನಿಂದ ಸಚಿವ ಭೈರತಿ ಬಸವರಾಜ್ ವಿರುದ್ಧದ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಿ ವಿರೋಧ ಪಕ್ಷ ಪಟ್ಟು ಹಿಡಿದು ಕುಳಿತಿದೆ. ಅದಕ್ಕೂ ಅವಕಾಶ ಕೊಡಿ ಎಂದರು. ಆಗ ಉತ್ತರ ಕರ್ನಾಟಕದಲ್ಲಿ ಕಿತ್ತು ತಿನ್ನುವಂತಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಎಂದು ಲಕ್ಷ್ಮಣ ಸವದಿ ಸಭಾಪತಿ ಬಳಿ ಮನವಿ ಮಾಡಿದರು.

ನಂತರ ಮಾತನಾಡಿದ ಶ್ರೀಕಂಠೇಗೌಡ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ನಮ್ಮ ಅಡ್ಡಿ ಇಲ್ಲ.ಇದಕ್ಕೂ ಮುಂಚೆ ಬೆಳಗಾವಿಯಲ್ಲಿ ಕರ್ನಾಟಕದ ಧ್ವಜಕ್ಕೆ ಬೆಂಕಿ ಇಟ್ಟ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಭೈರತಿ ಬಸವರಾಜ್ ವಿಚಾರ ಪ್ರಸ್ತಾಪಕ್ಕೆ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸಭೆಯಲ್ಲಿ ಕೇಳಿಕೊಂಡರು.

ನಂತರ ಮಾತನಾಡಿದ ಸಭಾಪತಿ, ನಾಳೆ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ಸಭೆಯನ್ನು ಪ್ರಾರಂಭಿಸಿ, ಪ್ರಶ್ನೋತ್ತರಗಳನ್ನು ಮುಗಿಸಿ ಇಡೀ ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ತಿಳಿಸಿದರು.

SCROLL FOR NEXT