ರಾಜ್ಯ

ಎರಡು ದಿನ ಡಿಸಿ, ಸಿಇಒಗಳ ಜೊತೆ ಸಿಎಂ ಸಭೆ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಯತ್ನ

Nagaraja AB

ಬೆಂಗಳೂರು: ವಿಧಾನಪರಿಷತ್  ಚುನಾವಣೆ ಹಾಗೂ ಚಳಿಗಾಲದ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಎರಡು ದಿನಗಳ ಕಾಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಪ್ರತ್ಯೇಕ ಸಭೆ ಕರೆದಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಲಿದೆ. ಶುಕ್ರವಾರ ಜಿಲ್ಲಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ಕಾರ್ಯ ಚಟುವಟಿಕೆಗಳು ಯಾವ ರೀತಿ ನಡೆಯುತ್ತಿವೆ ಹಾಗೂ ರಾಜ್ಯ ಸರ್ಕಾರ ಹೊಸದಾಗಿ ಘೋಷಿಸಿರುವ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ, ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿಗೆ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸುವ ಕಾರ್ಯ ಯಾವ ರೀತಿಯಲ್ಲಿ ನಡೆಯುತ್ತಿವೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ವಿವರ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

2021-22ನೇ ಸಾಲಿನ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಮುಕ್ತಾಯವಾಗಿದೆ. ಕೊನೆಯ ತ್ರೈಮಾಸಿಕದಲ್ಲಿ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನ, ಇದಕ್ಕೆ ಬೇಕಾಗಿರುವ ಆರ್ಥಿಕ ಸಂಪನ್ಮೂಲದ ಕೊರತೆ ಕುರಿತಂತೆಯೂ ಮುಖ್ಯಮಂತ್ರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಇದರೊಂದಿಗೆ ಬಜೆಟ್ ಸಿದ್ಧತೆಯೂ ಆರಂಭವಾಗಬೇಕಿರುವುದರಿಂದ ಈ ಬಗ್ಗೆಯೂ ಜಿಲ್ಲೆಗಳಲ್ಲಿ ಆಗಬೇಕಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸುವ ಸಾಧ್ಯತೆಯಿದೆ.

SCROLL FOR NEXT