ರಾಜ್ಯ

ನಾಯಕನಹಟ್ಟಿಯಲ್ಲಿ ಸಚಿವ ಬಿ.ಶ್ರೀರಾಮುಲು, ಕುಕನೂರಿನಲ್ಲಿ ಸಚಿವ ಆಚಾರ್, ಯಕ್ಸಂಬಾದಲ್ಲಿ ಶಶಿಕಲಾ ಜೊಲ್ಲೆಗೆ ಮುಖಭಂಗ, ಕಾಂಗ್ರೆಸ್ ಗೆಲುವು

Srinivasamurthy VN

ಕೊಪ್ಪಳ: ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ನಾಯಕನಹಟ್ಟಿಯಲ್ಲಿ ಸಚಿವ ಬಿ.ಶ್ರೀರಾಮುಲು, ಕುಕನೂರಿನಲ್ಲಿ ಸಚಿವ ಆಚಾರ್ ಗೆ ಭಾರಿ ಮುಖಭಂಗವಾಗಿದ್ದು, ಎರಡೂ ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಕೊಪ್ಪಳ ಜಿಲ್ಲೆಯ ಒಟ್ಟು ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುಕನೂರು ಪಪಂ ಅಧಿಕಾರದ ಗದ್ದುಗೆ ಕಾಂಗ್ರೆಸ್ ವಶವಾಗಿದೆ. ಆ ಮೂಲಕ ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ವ ಕ್ಷೇತ್ರದಲ್ಲೇ ತೀವ್ರ ಮುಖಭಂಗವಾಗಿದೆ. ಕುಕನೂರು ಪಪಂ ಒಟ್ಟು 19 ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ 10 ಸ್ಥಾನ ಗೆದ್ದರೆ, ಬಿಜೆಪಿ 9 ಸ್ಥಾನ ಗೆದ್ದಿದೆ. ವಿಶೇಷವೆಂಬಂತೆ ಸಚಿವ ಹಾಲಪ್ಪ ಆಚಾರ್ ಅವರ ಸ್ವ ಕ್ಷೇತ್ರ ಇದಾಗಿದ್ದು, ತಮ್ಮ ಕ್ಷೇತ್ರದಲ್ಲಿ ಪಟ್ಟಣ ಪಂಚಾಯತ್ ಆಡಳಿತ ಕೈ ವಶವಾಗಿದ್ದು, ಸಚಿವರಿಗೆ ತೀವ್ರ ನಿರಾಸೆ ತರಿಸಿದೆ.

ಈ ಬಾರಿ ಪಪಂ ಚುನಾವಣೆಯಲ್ಲಿ ಹಾಲಿ‌ ಸಚಿವ ಹಾಲಪ್ಪ ಆಚಾರ್, ಮಾಜಿ‌ ಸಚಿವ ಬಸವರಾಜ ರಾಯರಡ್ಡಿ ಅವರು ಜಿದ್ದಿಗೆ ಬಿದ್ದು ಚುನಾವಣಾ ಪ್ರಚಾರ ನಡೆಸಿ ಮತದಾರರಿಂದ ಮತ ಕೇಳಿದ್ದರು. ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು.

ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ, ಬಿಜೆಪಿ 8 ಸ್ಥಾನ ಪಡೆದಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರ ಮತ ಸೇರಿ ಓರ್ವ ಕೈ ಸದಸ್ಯನ ಆಪರೇಷನ್ ಮಾಡಿದ್ದರಿಂದ ಪಪಂ ಕಮಲದ ವಶವಾಗಿತ್ತು. ಈಗ ಮತ್ತೆ ಪಪಂ ಕೈ ವಶವಾಗಿದೆ. ಸಚಿವರಿಗೆ ಸ್ವ ಕ್ಷೇತ್ರದಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಇನ್ನು ಕೊಪ್ಪಳದ ಭಾಗ್ಯನಗರ 1 ಹಾಗೂ 11 ವಾರ್ಡಿನ ಫಲಿತಾಂಶ ಹೊರ ಬಂದಿದ್ದು, ಎರಡಲ್ಲಿಯೂ ಕಾಂಗ್ರೆಸ್ ಜಯಗಳಿಸಿದೆ. ಭಾಗ್ಯನಗರ ಪಟ್ಟಣ ಪಂಚಾಯತ್ ಯಲ್ಲಿ ಕಾಂಗ್ರೆಸ್ ಈಗ ನಾಲ್ಕು ಸ್ಥಾನದಲ್ಲಿ ಗೆಲುವು ಕಂಡಿದೆ.

ಸಾರಿಗೆ ಸಚಿವ ಶ್ರೀರಾಮುಲುಗೆ ಮುಖಭಂಗ
ಅಂತೆಯೇ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ. ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದ್ದು, ನಾಯಕನಹಟ್ಟಿ ಪಟ್ಟಣಪಂಚಾಯತ್ ನ 16 ವಾರ್ಡ್ಗಳಲ್ಲಿ ಕಾಂಗ್ರೆಸ್ 9, 3 ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವಾಗಿದ್ದು, ಬಿಜೆಪಿ ಖಾತೆ ತೆರೆಯದೆ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದೆ. 

ಇತ್ತ ಬೆಳಗಾವಿ ಜಿಲ್ಲೆ ಯಕ್ಸಂಬಾ ಪ.ಪಂ ಕಾಂಗ್ರೆಸ್​ ತೆಕ್ಕೆಗೆ ಜಾರಿದ್ದು, ಒಟ್ಟು 17ವಾರ್ಡ್ ಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 1ರಲ್ಲಿ ಗೆಲುವು ಸಾಧಿಸಿದ್ದು ಸಚಿವೆ ಶಶಿಕಲಾ ಜೊಲ್ಲೆ ಸ್ವಗ್ರಾಮದಲ್ಲೇ ಕಾಂಗ್ರೆಸ್​ಗೆ ಗೆಲುವು ಸಿಕ್ಕಿದ್ದು ಸಚಿವರಿಗೆ ತೀವ್ರ ಮುಖಭಂಗವಾದಂತಾಗಿದೆ.

ಗೆದ್ದಿರುವ ಮೂವರು ಪಕ್ಷೇತರರೂ ಸಹ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಬಿಜೆಪಿ ತೆಕ್ಕೆಯಲ್ಲಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಬಹುಮತ ಭರ್ಜರಿ ಜಯ ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಕಾಂಗ್ರೆಸ್‌ ಮುಖಂಡ ಯೋಗಿಶ್ ಬಾಬು, ‘ಈ ಗೆಲುವು ಕಾಂಗ್ರೆಸ್‌ ಪಕ್ಷದ ಗೆಲುವು. ಕ್ಷೇತ್ರದ ಜನರು ಸಚಿವ ಶ್ರೀರಾಮುಲು ಆಡಳಿತವನ್ನು ವಿರೋಧಿಸಿದ್ದಾರೆ. ಕ್ಷೇತ್ರದಲ್ಲಿ ಶೂನ್ಯ ಅಭಿವೃದ್ಧಿ ನೋಡಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಹೊರಗಿನಿಂದ ಬಂದು ಗೆದ್ದು, ಶಾಸಕನಾಗಿ ಸಚಿವರಾಗಿರುವ ಶ್ರೀರಾಮುಲು ಅವರಿಗೆ ಇದೊಂದು ಪಾಠ ಎಂದು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT