ಬೆಂಗಳೂರು: ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲನೆ ಮಾಡುವವರೆಗೆ ಬೆಂಗಳೂರಿನಲ್ಲಿ ಅನ್ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಂತಹಂತವಾಗಿ ಅನ್ಲಾಕ್ ಮಾಡುತ್ತಿದೆಯಾದರೂ ಸಂಪೂರ್ಣ ಅನ್ಲಾಕ್ ಮಾಡಲಾಗಿಲ್ಲ. ಹೀಗಾಗಿ ಆಯುಕ್ತರಾದ ಗೌರವ್ ಗುಪ್ತ ಸದ್ಯಕ್ಕೆ ಬೆಂಗಳೂರಿನಲ್ಲಿ ಸಂಪೂರ್ಣ ಅನ್ಲಾಕ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಅನ್ಲಾಕ್ ಬಗ್ಗೆ ಮಾತನಾಡಿರುವ ಗೌರವ್ ಗುಪ್ತಾ, "ಪ್ರತಿದಿನ 700 ರಿಂದ 800 ಕೇಸ್ ಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಒಂದು ಕಡೆ ಅನ್ಲಾಕ್ ಮಾಡುವಂತೆ ಒತ್ತಡ, ಮನವಿಗಳು ಬರುತ್ತಿವೆ. ಆದರೆ, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪರಿಪಾಲನೆ ಮಾಡಿದರೆ ಮಾತ್ರ ಅನ್ಲಾಕ್ ಮಾಡಲು ಸಾಧ್ಯ. ಈ ಕುರಿತು ರಾಜ್ಯ ಸರ್ಕಾರ ಅಂತಿನ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ರಸ್ತೆಯಲ್ಲಿ ವಾಹನಗಳಲ್ಲಿ ಚಲಿಸುವಾಗ ಯಾವ ರೀತಿ ಹೆಲ್ಮೆಡ್ ಹಾಗೂ ಸೀಟ್ ಬೆಲ್ಟ್ ಗಳನ್ನು ಧರಿಸುತ್ತೀವೆಯೋ ಹಾಗೆಯೇ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸೋಂಕು ಪ್ರಕರಣಗಳು ಕಡಿಮೆಯಾದರೂ, ವಾರ್ಡ್ ಮಟ್ಟದಲ್ಲಿ ಸೋಂಕಿತರ ಸಂಪರ್ಕ, ಕಂಟೈನ್ಮೆಂಟ್ ಹಾಗೂ ಹೋಂ ಐಸೋಲೇಷನ್ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೋವಿಡ್ ಲಸಿಕೆ ಕುರಿತು ಮಾತನಾಡಿ ಅವರು, ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಲಸಿಕೆಯ ಕೊರತೆ ಎದುರಾಗುತ್ತಿದೆ ಎಂದಿದ್ದಾರೆ.