ರಾಜ್ಯ

ಕನ್ನಡ ಪುಸ್ತಕ ಪ್ರಾಧಿಕಾರ ವಾರ್ಷಿಕ ಪ್ರಶಸ್ತಿ: ಸುಧೀಂದ್ರ ಹಾಲ್ದೊಡ್ಡೇರಿಗೆ ಅನುಪಮ ನಿರಂಜನ ವೈದ್ಯಕೀಯ, ವಿಜ್ಞಾನ ಸಾಹಿತ್ಯ ಪುರಸ್ಕಾರ

Raghavendra Adiga

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಇಂದು ನಿಧನರಾದ ಡಿಆರ್ ಡಿಒ ಮಾಜಿ ವಿಜ್ಞಾನಿ, ಪ್ರಸಿದ್ಧ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಅನುಪಮ ನಿರಂಜನ ವೈದ್ಯಕೀಯ, ವಿಜ್ಞಾನ ಸಾಹಿತ್ಯ ಪುರಸ್ಕಾರ ಲಭಿಸಿದೆ.

ಪ್ರಶಸ್ತಿಯು ರೂ.25,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

ಇದರೊಂದಿಗೆ ಹಿರಿಯ ಸಾಹಿತಿ, ಸಂಶೋಧಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರಿಗೆ ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪುರಕ್ಸಾರ, ಪುಸ್ತಕ ಪ್ರಾಧಿಕಾರ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಆಯ್ಕೆಯಾಗಿದೆ.

ಇನ್ನು ಇತ್ತೀಚೆಗೆ ಬೆಂಕಿಗಾಹುತಿಯಾಗಿದ್ದ ಸಾರ್ವಜನಿಕ ಗ್ರಂಥಾಲಯದ ನಿರ್ಮಾತೃ, ಅಪ್ಪಟ ಪುಸ್ತಕ ಪ್ರೇಮಿ ಮೈಸೂರಿನ ಸಯ್ಯದ್ ಇಸಾಕ್ ಅವರಿಗೆ ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ, ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ರೂ. 75,000 ನಗದು ಹಾಗೂ ಪ್ರಶಸ್ತಿ ಫಲಕ, ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ.50,000 ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರಲಿದೆ ಎಂದು ನಂದೀಶ್ ಹಂಚೆ ಮಾಹಿತಿ ನೀಡಿದ್ದಾರೆ.

ಇನ್ನು ಪುಸ್ತಕ ಬಹುಮಾನಗಳ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

SCROLL FOR NEXT