ರಾಜ್ಯ

ನಕಲಿ ವಿಡಿಯೊ ಸೃಷ್ಟಿಸಿ ಸುಮಲತಾ ಹೆಸರಿಗೆ ಮಸಿ ಬಳಿಯಲು ಕುತಂತ್ರ ಮಾಡಿದ್ದಾರೆ: ರಾಕ್ ಲೈನ್ ವೆಂಕಟೇಶ್ ಆರೋಪ

Sumana Upadhyaya

ಬೆಂಗಳೂರು: ಸಂಸದೆ ಸುಮಲತಾ ಅಂಬರೀಷ್ ಪರ ಮಾತನಾಡಿರುವ ಚಲನಚಿತ್ರ ನಿರ್ಮಾಪಕ, ಅಂಬರೀಷ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಅವರ ವಿರುದ್ಧ ಹಲವು ಆರೋಪಗಳನ್ನು ಶುಕ್ರವಾರ ಮಾಧ್ಯಮಗಳ ಮುಂದೆ ಮಾಡಿದ್ದಾರೆ.

ಕಳೆದ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಕಲಿ ವಿಡಿಯೊ ಸೃಷ್ಟಿಸಿ ತಮ್ಮ ಮತ್ತು ಸುಮಲತಾ ಅವರ ತೇಜೋವಧೆ ಮಾಡಲು ಹೊರಟಿದ್ದರು, ಸುಮಲತಾ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದರು ಎಂದು ಗುರುತರ ಆರೋಪಗಳನ್ನು ಮಾಡಿದ್ದಾರೆ.

ಚುನಾವಣೆ ಸಂಬಂಧ ಬೆಂಗಳೂರು ಮತ್ತು ಮಂಡ್ಯದಲ್ಲಿ ಹಲವು ಸಭೆಗಳನ್ನು,ಚರ್ಚೆಗಳನ್ನು ಮಾಡುತ್ತಿದ್ದೆವು. ನಮ್ಮ ಬೆಂಬಲಿಗರ ಜೊತೆ ಚರ್ಚಿಸಲು ಹೊಟೇಲ್ ಗಳಲ್ಲಿ ಕೂಡ ಸಭೆ ಮಾಡುತ್ತಿದ್ದೆವು. ಹೀಗೆ ಏಟ್ರಿಯಾ ಹೊಟೇಲ್ ನಲ್ಲಿ ಸಭೆ ನಡೆಸಲು ನಿಶ್ಚಯಿಸಿದ್ದಾಗ ಕಾರಿನಿಂದ ನಾನು ಮತ್ತು ಸುಮಲತಾ ಅವರು ಇಳಿದು ಹೋಗುವಾಗ ಹೊಟೇಲ್ ನ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಸೆಕ್ಯುರಿಟಿ ಕೈಯಿಂದ ಪಡೆದುಕೊಂಡು ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೊ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು.

ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯ ಚಾನೆಲ್ ನಲ್ಲಿದ್ದ ಅಂಬರೀಷ್ ಅವರ ಅಭಿಮಾನಿಯೇ ನನ್ನಲ್ಲಿ ಹೇಳಿದ್ದರು, ಕೊನೆಗೆ ಅದು ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡದೆ, ಇನ್ನೊಂದು ಸಂದರ್ಭದಲ್ಲಿ ನೋಡೋಣ ಎಂದು ನಿರ್ಧರಿಸಿದ್ದಾರೆ ಎಂದರು. ಅಂದರೆ ಅವರ ಮನಸ್ಸು ಎಷ್ಟು ಹೊಲಸಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿಯವರನ್ನೇ ಸಂಬೋಧಿಸಿ ರಾಕ್ ಲೈನ್ ವೆಂಕಟೇಶ್ ಆರೋಪಿಸಿದ್ದಾರೆ.

ಡಾ ರಾಜ್ ಕುಮಾರ್ ಅವರು ತೀರಿಕೊಂಡಾಗ ಯಾರು ಸಿಎಂ ಆಗಿದ್ದರು ಎಂದು ಗೊತ್ತಿದೆ, ಡಾ ವಿಷ್ಣುವರ್ಧನ್ ಅವರು ತೀರಿಕೊಂಡಾಗ ಅಂಬರೀಷ್ ಅವರೇ ಖುದ್ದು ನಿಂತು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಅಂಬರೀಷ್ ಅವರಿಗೆ ಯಾರೂ ಬೇಕಾಗಿಲ್ಲ, ಯಾರು ಏನೂ ಮಾಡಬೇಕಾಗಿರಲಿಲ್ಲ, ಅವರು ದೇವಮಾನವ, ದೇವರು ಅವರಿಗೆ ಮಾಡಬೇಕಾದ್ದನ್ನು ಮಾಡಿಸಿಕೊಂಡು ಕರೆದುಕೊಂಡು ಹೋದರು ಎಂದರು.

ಸುಮಲತಾ ಅವರಿಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಇಂದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದರು. 

ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಅಂತ ಹೇಳುತ್ತಿರಾ? ನಿಮ್ಮ ವಕ್ತಾರರ ಕೈಯಲ್ಲಿ ಅಂಬರೀಶ್ ಬಗ್ಗೆ ಮಾತಾಡ್ತೀರಾ? ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕುಮಾರಸ್ವಾಮಿ ಕಾಯಿಸಿದ್ದರು. ದೊಡ್ಡಣ್ಣ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರಿ. ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ? ಅಂದು ನಿಖಿಲ್ ನಿಲ್ತಾರೆ ಅಂತ ನೀವು ಬಂದು ಕೇಳಿದ್ರೆ ಸುಮಲತಾ ಅವರೇ ನಿಂತು ನಿಖಿಲ್ ಪರ ಕೆಲಸ ಮಾಡೋರು. ಸುಮಲತಾಗೆ ಚುನಾವಣೆಗೆ ನಿಲ್ಲಲು ಇಷ್ಟ ಇರಲಿಲ್ಲ ಎಂದು ರಾಕ್ ಲೈನ್ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರು. 

ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದಾರೆ: ಸುಮಲತಾ ಅಧಿಕೃತ ಕೆಲಸ ಅವರ ಅಣ್ಣನ ಮಗ ಮಧು ನೋಡಿಕೊಳ್ಳುತ್ತಾರೆ. ದೆಹಲಿಗೆ ಹೋದಾಗ ನಾನು, ದೊಡ್ಡಣ್ಣ, ಮಧು ಯಾರಾದ್ರು ಹೋಗ್ತೀವಿ ಸುಮಲತಾ ಟ್ರ್ಯಾಪ್ ಮಾಡೋಕೆ ಯಾರ್ ಯಾರನ್ನ ಕಳಿಸಿದ್ರು ಅಂತ ನಮಗೆ ಗೊತ್ತಿದೆ. ಒಂದು ಸಂಸ್ಥೆಯಿಂದ ಒಬ್ಬ ವ್ಯಕ್ತಿಯನ್ನ ಸುಮಲತಾ ಆಫೀಸ್‍ಗೆ ಕಳಿಸ್ತಾರೆ. ಸುಮಲತಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್ ಮಾಡಿದ್ದರು. ಆದ್ರೆ ಸಂಸದೆ ಸುಮಲತಾ ಅವರು ನಾವು ಮೀಟ್ ಆಗೊಲ್ಲ ಅಂದ್ರು. ನಂತರ ದೊಡ್ಡ ಸಂಸ್ಥೆ ಮಾತಾಡದೇ ಸರಿ ಹೋಗೊಲ್ಲ ಅಂತ ಮಧು ಮಾತಾಡಿದ್ರು. ಅವನು ಎಲ್ಲಾ ರೆಕಾರ್ಡ್ ಮಾಡುತ್ತಿದ್ದ. ಅವತ್ತು ನಾನು ವಿಡಿಯೋ, ಆಡಿಯೋ ಮಾಡಿದ್ದೇನೆ. ಇವರು ಯಾಕೆ ಆಡಿಯೋ ಬಿಡ್ತಿಲ್ಲ ಅಂದ್ರೆ ಕುಮಾರಸ್ವಾಮಿ ಹೆಸರು ಅದರಲ್ಲಿ ಇದೆ ಅದಕ್ಕೆ ಬಿಡ್ತಿಲ್ಲ ಎಂದು ಆರೋಪಿಸಿದರು. 

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಒಳ್ಳೆ ಕೆಲಸ ಮಾಡಿದ್ದೀರಿ, ಹೆಸರು ಕೆಡಿಸಿಕೊಳ್ಳಬೇಡಿ, ಸಿನೆಮಾದಲ್ಲಿ ಮುಂಗಾರು ಮಳೆ ಗಣೇಶ್ ರಂತೆ ರಿಯಲ್ ಲೈಫ್ ನಲ್ಲಿ ಇದ್ದ ನೀವು ಈಗ ಸಿನೆಮಾದಲ್ಲಿ ವಿಲನ್ ವಜ್ರಮುನಿಯಂತೆ ನಿಜಜೀವನದಲ್ಲಿ ಆಗುತ್ತಿದ್ದೀರಿ, ನೀವು ನನಗೆ ಚಿತ್ರರಂಗದಿಂದ ತುಂಬಾ ಪರಿಚಿತರು, ಹೆಸರು ಕೆಡಿಸಿಕೊಳ್ಳಬೇಡಿ, ಜನಪರ ಕೆಲಸ ಮಾಡಿಕೊಂಡು ಹೋಗಿ ಎಂದು ರಾಕ್ ಲೈನ್ ವೆಂಕಟೇಶ್ ಬುದ್ದಿವಾದ ರೀತಿ ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ. 

SCROLL FOR NEXT